
ನವದೆಹಲಿ: ಮತಗಳ್ಳತನ ಆರೋಪ- ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ
ನವದೆಹಲಿ: ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಹಾಗೂ ಅದರ ವ್ಯಾಪ್ತಿಯ ಮಹದೇವಪುರ ವಿಧಾನಸಭೆ ಕ್ಷೇತ್ರದ ದತ್ತಾಂಶಗಳನ್ನು ವಿಶ್ಲೇಷಿಸಿರುವುದಾಗಿ ಹೇಳಿದ್ದಾರೆ. ಹಾಗೆಯೇ, ಅಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂಬುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಕ್ಷೇತ್ರದಲ್ಲಿ ಸುಮಾರು 1,00,250 ಮತಗಳ್ಳತನವಾಗಿದೆ ಎಂದು ಅಂಕಿ-ಅಂಶಗಳ ಸಮೇತ ಪ್ರಸ್ತಾಪಿಸಿರುವ ರಾಹುಲ್, ಈ ಪೈಕಿ 11,965 ನಕಲಿ ಮತದಾರರು ಒಂದೇ ವಿಧಾನಸಭೆ ವ್ಯಾಪ್ತಿಯಲ್ಲಿದ್ದಾರೆ. ಉಳಿದಂತೆ, ಸುಮಾರು 40,009 ಮಂದಿ ನಕಲಿ ಹಾಗೂ ಸುಳ್ಳು ವಿಳಾಸ ಹೊಂದಿದವರು. 10,452 ಮತದಾರರ ಹೆಸರಿನಲ್ಲಿ ಒಂದೇ ವಿಳಾಸ ಉಲ್ಲೇಖವಾಗಿದೆ. 4,132 ಮತದಾರರ ಫೋಟೊ ಅಮಾನ್ಯವಾಗಿದೆ. ಹಾಗೆಯೇ, ಸುಮಾರು 33,692 ಮಂದಿ ಹೊಸ ಮತದಾರರ ನೋಂದಣಿಗೆ ಇರುವ ಫಾರ್ಮ್-6 ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ದೇಶದಾದ್ಯಂತ ಇದೇ ರೀತಿಯ ಅಕ್ರಮಗಳು ನಡೆದಿವೆ ಎಂದು ಪ್ರತಿಪಾದಿಸಿರುವ ರಾಹುಲ್, ಇದು ಸಂವಿಧಾನ ಹಾಗೂ ರಾಷ್ಟ್ರದ ಸಮಗ್ರತೆಯ ವಿರುದ್ಧದ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಕ್ರಿಯೆಯನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂಬುದನ್ನು ಆಯೋಗಕ್ಕೆ ನೆನಪಿಸಲು ಬಯಸುವುದಾಗಿ ರಾಹುಲ್ ಗಾಂಧಿ ಹೇಳಿದರು.