ಒಳಮೀಸಲಾತಿ ವರದಿ ಬಗ್ಗೆ ಪರಾಮರ್ಶೆ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿ- ಲೋಲಾಕ್ಷ ಒತ್ತಾಯ

ಒಳಮೀಸಲಾತಿ ವರದಿ ಬಗ್ಗೆ ಪರಾಮರ್ಶೆ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿ- ಲೋಲಾಕ್ಷ ಒತ್ತಾಯ

 

ಮಂಗಳೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿ ನ್ಯಾ. ಎಚ್.ಎನ್. ನಾಗಮೋಹನ ದಾಸ್ ಆಯೋಗ ಸಲ್ಲಿಸಿರುವ ವರದಿ ಬಗ್ಗೆ ಪರಾಮರ್ಶೆ ನಡೆಸಲು ರಾಜ್ಯ ಸಚಿವ ಸಂಪುಟ ಉಪ ಸಮಿತಿ ರಚಿಸಬೇಕು ಎಂದು ಪರಿಶಿಷ್ಟರ ಮಹಾಒಕ್ಕೂಟ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಆಗ್ರಹ ಮಾಡಿದ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಕರ್ನಾಟಕ ರಾಜ್ಯದ 101 ಪರಿಶಿಷ್ಟ ಜಾತಿಗಳ ಜನರ ನಡುವೆ ಒಳ ಮೀಸಲಾತಿ ನೀತಿ ಜಾರಿಗೆ ತರುವ ಉದ್ದೇಶದಿಂದ ರಚನೆಯಾದ ನ್ಯಾ. ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯ ಬಗ್ಗೆ ರಾಜ್ಯದ ಪರಿಶಿಷ್ಟ ಜಾತಿಗಳ ಜನರು, ಸಂಘಟನೆಗಳ ಅಭಿಪ್ರಾಯ ಹಾಗೂ ಅಹವಾಲುಗಳನ್ನು ಆಲಿಸಿ ಸ್ವೀಕರಿಸಿ ವರದಿಯ ಸಾಧಕ ಬಾಧಕಗಳ ಬಗ್ಗೆ ವಿಸ್ತ್ರತ ಪರಾಮರ್ಶೆ ನಡೆಸಬೇಕು ಎಂದರು.ಇದಕ್ಕಾಗಿ ರಾಜ್ಯ ಸಚಿವ ಸಂಪುಟ ಉಪ ಸಮಿತಿ ರಚಿಸಲು ಆ. 16ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟದ ಸಭೆ ನಿರ್ಣಯ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದರು.

ಪ್ರಸ್ತಾಪಿತ ಒಳಮೀಸಲಾತಿ ನೀತಿಯು ರಾಜ್ಯದ ಶೋಷಿತ -ವಂಚಿತ 101 ಪರಿಶಿಷ್ಟ ಜಾತಿಗಳ ನಡುವೆ ಇರುವ ಅತ್ಯಂತ ದುರ್ಬಲರಿಗೆ ವಿಶೇಷ ಆದ್ಯತೆ ಮೂಲಕ ಶಕ್ತಿ ತುಂಬುವ, ಎಲ್ಲ ರೀತಿಯಲ್ಲಿ ನ್ಯಾಯ ಖಾತರಿ ಮಾಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಇರುವ, ಎಡ - ಬಲ - ಇತ್ಯಾದಿ ನೆಲೆಗಟ್ಟಿನಲ್ಲಿ ತಾರತಮ್ಯ ನೀತಿ ಅನುಸರಿಸದ, ಪರಿಶಿಷ್ಟ ಜಾತಿಗೆ ಸೇರಿಲ್ಲದ ಹಿರಿಯ ಸಚಿವರೊಬ್ಬರ ನೇತೃತ್ವದಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದ ಎಲ್ಲಾ ಸಚಿವರನ್ನು ಒಳಗೊಂಡಂತೆ, ಸಚಿವ ಸಂಪುಟದ ಉಪ ಸಮಿತಿ ರಚಿಸಬೇಕು ಎಂದವರು ಹೇಳಿದರು.

ಈ ವರದಿಯ ಕುರಿತು ಸರಕಾರ ಕೈಗೊಳ್ಳುವ ಯಾವುದೇ ನಿರ್ಣಯವು ರಾಜ್ಯದ 27,24,768 ಕುಟುಂಬಗಳಿಗೆ ಸೇರಿದ ಪರಿಶಿಷ್ಟ ಜಾತಿಗಳ 1,07,01,982 ಜನರ ಸರ್ವತೋಮುಖ ಬದುಕಿನ, ಭವಿಷ್ಯದ ಮೇಲೆ ಮಹತ್ವ ಪೂರ್ಣ ಪರಿಣಾಮ ಬೀರುವುದರಿಂದ, ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವರು ಈ ಕುರಿತು ಯಾವುದೇ ರೀತಿಯಲ್ಲಿ ಅವಸರದ ತೀರ್ಮಾನ ಕೈಗೊಳ್ಳಬಾರದು.

ಈ ಸಚಿವ ಸಂಪುಟದ ಉಪ ಸಮಿತಿ ಈ ವಿಧಾನಸಭಾ ಅಧಿವೇಶನ ಮುಗಿದ ಕೂಡಲೇ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಅಥವಾ ಕನಿಷ್ಠ ರಾಜ್ಯದಲ್ಲಿ ಗುಲ್ಬರ್ಗ, ಬೆಳಗಾವಿ, ಮಂಗಳೂರು, ಮೈಸೂರು ಮತ್ತು ಬೆಂಗಳೂರಿನಲ್ಲಿ, ಈ ಸಂಬಂಧ ಸಭೆ ನಡೆಸಿ, ಪರಿಶಿಷ್ಟ ಜಾತಿಗಳ ಜನರ/ಸಂಘಟನೆಗಳ ಅಹವಾಲು ಸ್ವೀಕರಿಸಬೇಕು ಮತ್ತು ಈ ಸಂಬಂಧ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸರಕಾರಕ್ಕೆಸೂಕ್ತ ಶಿಫಾರಸ್ಸುಗಳನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕಾಂತಪ್ಪ ಅಲಂಗಾರು, ಅನಿಲ್ ಕುಮಾರ್ ಕಂಕನಾಡಿ,ಲಕ್ಷ್ಮಣ್ ಕಾಂಚನ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article