
ಧರ್ಮಸ್ಥಳ: 38 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಅಪಹರಣ, ಅತ್ಯಾಚಾರ ಪ್ರಕರಣ- ಪದ್ಮಲತಾ ಸಹೋದರಿ ಇಂದ್ರಾವತಿಯಿಂದ ಎಸ್ ಐ ಟಿಗೆ ದೂರು
ಧರ್ಮಸ್ಥಳ: 38 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಅಪಹರಣ, ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಪದ್ಮಲತಾ ಅವರ ಕಳೇಬರವನ್ನು ಹೊರತೆಗೆದು ಮರು ತನಿಖೆ ಮಾಡುವಂತೆ ಕೋರಿ ಎಸ್‌ಐಟಿಗೆ ಪದ್ಮಲತಾ ಸಹೋದರಿ ಇಂದ್ರಾವತಿ ದೂರು ನೀಡಿದ್ದಾರೆ.
ದೂರಿನ ಸಾರಾಂಶ ಹೀಗಿದೆ :
"ನಾನು ಪ್ರಸ್ತುತ ನೆಲ್ಯಾಡಿ ನಿವಾಸಿಯಾಗಿದ್ದು ದಿವಂಗತ ದೇವಾನಂದ ಅವರ ಮಗಳು. ಕೊಲೆಗೀಡಾದ ಪದ್ಮಲತಾಳ ಅಕ್ಕನಾಗಿರುತ್ತೇನೆ. 38 ವರ್ಷಗಳ ಹಿಂದೆ ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ನನ್ನ ತಂಗಿ ಪದ್ಮಲತಾ ದಿನಾಂಕ 22.12.1986ರಂದು ಉಜಿರೆ ಕಾಲೇಜಿಗೆ ಹೋದವಳು ಸಂಜೆ ಧರ್ಮಸ್ಥಳ ತನಕ ಬಂದು ಕಾಣೆಯಾಗಿರುತ್ತಾಳೆ. ಆಕೆಯ ಮೃತದೇಹ ದಿನಾಂಕ 17.02.1987 ರಂದು ನೆರಿಯ ಹೊಳೆಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಮ್ಮ ತಂದೆ ಮನೆಯು ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ಇತ್ತು” ಎಂದು ವಿವರಿಸಿದ್ದಾರೆ.
“ನನ್ನ ತಂಗಿಯ ಈ ಅಪಹರಣ, ಅತ್ಯಾಚಾರ, ಕೊಲೆ ಆಗಿರುವ ಕಾರಣ ಆಕೆಯ ಅಸಹಜ ಸಾವಿಗೆ ಕಾರಣರಾದ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಆಗ್ರಹಿಸಿ ಸಿಪಿಐಎಂ ಮುಖಂಡರೂ ಆಗಿದ್ದ ನನ್ನ ತಂದೆ ದಿವಂಗತ ದೇವಾನಂದ ಅವರು ಸಿಪಿಐಎಂ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ರೂಪಿಸಿದ್ದರು. ಹೋರಾಟಕ್ಕೆ ಮಣಿದ ಸರಕಾರ ಕೊನೆಗೆ ಪ್ರಕರಣದ ತನಿಖೆ ನಡೆಸಲು ಸಿಓಡಿ ತನಿಖೆಗೆ ಆದೇಶಿಸಿತು. ವಿಧಾನಸಭೆಯಲ್ಲಿ ಚರ್ಚೆ ಆಗಿರುವುದು ಕೂಡಾ ವಿಧಾನಸಭಾ ದಾಖಲೆಯಲ್ಲಿ ಇರಬೇಕು. ಅಂದು ಸಚಿವರಾಗಿದ್ದ ರಾಚಯ್ಯ ಅವರೂ ಧರ್ಮಸ್ಥಳ ಗ್ರಾಮದ ಬೊಳಿಯಾರಲ್ಲಿರುವ ನಮ್ಮ ಮನೆಗೆ ಬಂದು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ ಕೊನೆಗೆ ತನಿಖೆಯು ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ನಮಗೆ ನ್ಯಾಯ ಸಿಗದಂತಾಗಿತ್ತು” ಎಂದು ದೂರಿನಲ್ಲಿ ತಿಳಿಸಿದ್ದಾರೆ.