
ಬೆಂಗಳೂರು: ಮಾಡಬೇಡಿ ಎಂದರೂ ಮುಷ್ಕರ ಮಾಡಿದ್ದೀರಿ- ಬಂಧಿಸುವ ಆದೇಶ ನೀಡಬೇಕಾದೀತು- ಹೈಕೋರ್ಟ್ ಎಚ್ಚರಿಕೆ
ಬೆಂಗಳೂರು: ಹೈಕೋರ್ಟ್ ಸೂಚನೆಯಿದ್ದರೂ ಮುಷ್ಕರ ನಡೆಸಿದ ಜಂಟಿ ಕ್ರಿಯಾ ಸಮಿತಿ ನಡೆಗೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಮುಷ್ಕರ ನಡೆಸದಂತೆ ನ್ಯಾಯಾಲಯ ಹೇಳಿದರೂ ಮುಷ್ಕರ ನಡೆಸುವುದನ್ನು ಪೀಠ ಸಹಿಸುವುದಿಲ್ಲ ಎಂದು ಹೇಳಿದೆ.
ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ವಿಭು ಬಬ್ರು ಮತ್ತು ನ್ಯಾ. ಸಿ.ಎಂ ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠವು, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು, ಎಸ್ಮಾ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳನ್ನು ಬಂಧಿಸುವ ಆದೇಶ ನೀಡಬೇಕಾದಿತು ಎಂದು ಎಚ್ಚರಿಕೆ ನೀಡಿದೆ.ಮುಷ್ಕರ ನಿಲ್ಲಿಸಿರುವ ಬಗ್ಗೆ ನಾಳೆ (ಬುಧವಾರ) ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಬೇಕು, ಎಸ್ಮಾ ಕಾಯ್ದೆ ಉಲ್ಲಂಘಿಸಿದರೆ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ ಹೈಕೋರ್ಟ್, ಮುಷ್ಕರ ನಡೆಸದಂತೆ ಸೋಮವಾರ ನೀಡಿದ್ದ ಮಧ್ಯಂತರ ಆದೇಶವನ್ನು ಎರಡು ದಿನ ವಿಸ್ತರಿಸಿದೆ. ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಲಾಗಿದೆ.
ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಕೋರ್ಟ್ ಗೆ ಎಜಿ ಹೇಳಿದರು. ರಾಜಿ ಸಂಧಾನದ ಮಾತುಕತೆ ಏನಾಗಿದೆ ಎಂದು ಪೀಠ ಪ್ರಶ್ನೆ ಮಾಡಿದಾಗ ಇಲ್ಲಿಯವರೆಗೆ ನಡೆದ ಮಾತುಕತೆಗಳ ವಿವರ ನೀಡಿದರು.
ನಿಮ್ಮ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಜನಸಾಮಾನ್ಯರನ್ನು ಒತ್ತೆಯಾಗಿರಿಸುವುದನ್ನು ಸಹಿಸುವುದಿಲ್ಲ ಎಂದು ಪೀಠ ಹೇಳಿತು.