
ಉಡುಪಿ: ಲಕ್ಷಾಂತರ ಮೌಲ್ಯದ ಹಣ , ಚಿನ್ನ ಪಡೆದು ವಂಚಿಸಿದ ಮಹಿಳೆ - ನ್ಯಾಯಕ್ಕಾಗಿ ಮಹಿಳೆಯರ ಒತ್ತಾಯ
ಉಡುಪಿ: ಉಡುಪಿ ಜಿಲ್ಲೆಯ ಕೋಟ ಠಾಣೆ ವ್ಯಾಪ್ತಿಯ ಜಾನುವಾರುಕಟ್ಟೆ ಬಳಿಯ ಸುಶೀಲ ಎಂಬಾಕೆ ಚಾಲೆಂಜಿಂಗ್ ಫೌಂಡೇಷನ್ ಸಂಸ್ಥೆ ಮತ್ತು ದಲಿತ ಸಂಘ ಭೀಮ ಘರ್ಜನೆ ಸಂಘಟನೆಯ ಅಧ್ಯಕ್ಷಳು ಎಂದು ಹೇಳಿಕೊಂಡು ಲಕ್ಷಾಂತರ ರೂ.ನಗದು ಮತ್ತು ಚಿನ್ನ ಪಡೆದು ವಂಚಿಸಿದ್ದಾಗಿ ಮಹಿಳೆಯರು ದೂರಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ನಮ್ಮ ಸಂಸ್ಥೆಯಲ್ಲಿ ಒಂದು ಲಕ್ಷದ ಅರವತ್ತು ಸಾವಿರ ಡೆಪಾಸಿಟ್ ಇಟ್ಟಲ್ಲಿ 16 ಲಕ್ಷ ಸಾಲ ಸಿಗುವುದಾಗಿ ನಂಬಿಸಿದ್ದಳು. ಅದನ್ನು ನಂಬಿ ನಾನು ಅವಳಿಗೆ ಒಂದು ಲಕ್ಷದ ಅರವತ್ತು ಸಾವಿರ ಹಣ ನೀಡಿದ್ದೇನೆ. ನಂತರ 16 ಲಕ್ಷಕ್ಕೆ ಜಿ.ಎಸ್.ಟಿ. ಹಣವನ್ನು ಮೊದಲೇ ಕಟ್ಟಬೇಕು ಎಂದು ನನ್ನನ್ನು ನಂಬಿಸಿ 20 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 4 ಗ್ರಾಂ ತೂಕದ ಚಿನ್ನದ ಉಂಗುರ ಪಡೆದಿದ್ದಾಳೆ. ನಂತರ ಪುನಃ ಸಂಸ್ಥೆಯ ಡೆಪಾಸಿಟ್ ಪುಸ್ತಕದಲ್ಲಿ 50,000 ಇಟ್ಟಲ್ಲಿ ಮಾತ್ರ 16 ಲಕ್ಷ ಸಾಲದ ಹಣ ಪಡೆಯಬಹುದು ಎಂದು ತಿಳಿಸಿ, ನನ್ನಲ್ಲಿ ರೂ. 50.000 ಕ್ಕೆ ಬೇಡಿಕೆ ಇಟ್ಟಿದ್ದಾಳೆ. ನನ್ನ ಬಳಿ ಹಣ ಇಲ್ಲದ ಕಾರಣ ಸುಮಾರು 31 ಗ್ರಾಂ ತೂಕದ ಹವಳದ ಸರ ಪಡೆದುಕೊಂಡು ವಂಚಿಸಿದ್ದಾಳೆ. ನಾನು ನೀಡಿದ ಚಿನ್ನವನ್ನೂ ಸೊಸೈಟಿಯಲ್ಲಿ ಅಡ ಇಟ್ಟಿದ್ದಾಳೆ.
ಹಣ ವಾಪಾಸು ಕೇಳಿದರೆ ನಾನೊಬ್ಬ ದಲಿತ ಮಹಿಳೆ, ನಿಮ್ಮ ವಿರುದ್ಧ ಜಾತಿ ನಿಂದನೆ ಕೇಸು ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ. ನನ್ನಂತೆಯೇ ಇತರೆ ಮಹಿಳೆಯರಿಗೂ ವಂಚಿಸಿದ್ದು ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ, ದೂರು ದಾಖಲಿಸಿದ್ದೇನೆ. ನಮಗೆ ನ್ಯಾಯ ಬೇಕು ಎಂದು ವಂಚನೆಗೆ ಒಳಗಾದ ಮಾಲತಿ ಮತ್ತಿತರರು ಒತ್ತಾಯಿಸಿದ್ದಾರೆ.