ನವದೆಹಲಿ: ಮತದಾರರ ಪಟ್ಟಿಯಿಂದ ಅಳಿಸುವಿಕೆ(ಡಿಲಿಟ್)ಯಿಂದ ವ್ಯಕ್ತಿಯ ಪೌರತ್ವವು ರದ್ದಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಚುನಾವಣಾ ಆಯೋಗವು ಮತದಾರರ ಪಟ್ಟಿಗಳನ್ನು ನಿರ್ವಹಿಸುತ್ತದೆ, ಆದರೆ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಶ್ಚಿಮ ಬಂಗಾಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದ ವಿಧಾನಸಭಾ ಕ್ಷೇತ್ರವಾರು ಡೇಟಾ ಬಹಿರಂಗಪಡಿಸುವಂತೆ ಕೋರಿ ಪಶ್ಚಿಮ ಬಂಗಾಳ ಕಾಂಗ್ರೆಸ್ನ ಎಸ್‌ಐರ್ ಸಮಿತಿಯ ಅಧ್ಯಕ್ಷ ಪ್ರಸೇನ್‌ಜಿತ್ ಬೋಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ.ಮೋಹನ್ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಅರ್ಜಿ ಸಂಬಂಧ ಚುನಾವಣಾ ಆಯೋಗ, ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯ ಚುನಾವಣಾ ಸಮಿತಿಯು ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.
ಎಸ್ಐಆರ್ ಬಳಿಕ ಸ್ವೀಕರಿಸಿದ ಮತ್ತು ತಿರಸ್ಕರಿಸಲಾದ ನಮೂನೆ 6 ಮತ್ತು 7ರ ಸಂಖ್ಯೆ, ಹಾಗೆಯೇ ಮೇಲ್ಮನವಿ ನ್ಯಾಯಮಂಡಳಿಗಳ ಮುಂದೆ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ಅರ್ಜಿದಾರರು ಕೋರಿದ್ದಾರೆ.
ವಿಚಾರಣೆ ವೇಳೆ, ಪೀಠವು ಈ ಹಿಂದೆ ಬಿಹಾರ ಎಸ್ಐಆರ್ ಪ್ರಕ್ರಿಯೆ ಕುರಿತಂತೆ ನೀಡಲಾದ ತೀರ್ಪನ್ನು ಉಲ್ಲೇಖಿಸಿ, ಪೌರತ್ವವನ್ನು ನಿರ್ಧರಿಸುವ ಅಂತಿಮ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ. ಕೇವಲ ಮತದಾರರ ಪಟ್ಟಿಯಿಂದ ತೆಗೆದುಹಾಕುವುದರಿಂದ, ದೇಶದ ಪೌರತ್ವದ ನಿರ್ಧಾರ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲರು, ಅಳಿಸಲಾದ ಮತದಾರರ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ನಿಭಾಯಿಸಲು ಸ್ಥಾಪಿಸಲಾದ 18 ನ್ಯಾಯಮಂಡಳಿಗಳು ಕಾರ್ಯನಿರ್ವಹಿಸುತ್ತಿರುವ ವಿಧಾನವು ಪ್ರಾಯೋಗಿಕ ಮಟ್ಟದಲ್ಲಿ ವ್ಯತ್ಯಾಸಗಳು ಮತ್ತು ವಿಳಂಬಗಳಿಗೆ ಕಾರಣವಾಗುತ್ತಿದೆ. ಪಟ್ಟಿಯಿಂದ ಹೆಸರು ಕೈಬಿಟ್ಟ ಬಳಿಕ ಮೇಲ್ಮನವಿ ಸಲ್ಲಿಕೆಯಾದ ನಂತರ 70%ರಷ್ಟು ಮತದಾರರನ್ನು ಮರಳಿ ಸೇರಿಸಲಾಗಿದ್ದು, 30% ಮೇಲ್ಮನವಿಗಳನ್ನು ನಿರಾಕರಿಸಲಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಿಂದ ಡಿಲಿಟ್ ಆದ ಬಳಿಕ, ಅಂತವರನ್ನು ಮಹಿಳೆಯರಿಗಾಗಿಯೇ ಇರುವ ಅನ್ನಪೂರ್ಣ ಯೋಜನೆ, ಮಹಿಳಾ ಕೇಂದ್ರಿತ ನಗದು ವರ್ಗಾವಣೆ ಮತ್ತು ಜಾತಿ ಪ್ರಮಾಣಪತ್ರ ಪರಿಶೀಲನೆಯಿಂದ ಹೊರಗಿಡಲಾಗುತ್ತಿದೆ ಎಂದು ವಕೀಲರು ವಾದಿಸಿದರು. ಅದಕ್ಕೆ ಪೀಠ, ಇದರ ಬಗ್ಗೆ ಈ ಹಿಂದೆಯೇ ಕಳವಳ ವ್ಯಕ್ತಪಡಿಸಲಾಗಿತ್ತು. ನಮಗೆ ಇದರ ಅರಿವಿದೆ ಎಂದು ಹೇಳಿತು.
ಅಲ್ಲದೆ, ಬಿಹಾರ ಎಸ್ಐಆರ್ ಕುರಿತಾದ ತೀರ್ಪಿನಲ್ಲಿ ಈ ಕುರಿತಂತೆ ಸೂಚನೆ ನೀಡಲಾಗಿದೆ. ಚುನಾವಣೆ ಆಯೋಗಕ್ಕೆ ಅದರದೇ ಆದ ಕರ್ತವ್ಯವಿದೆ ಎಂದು ಸ್ಪಷ್ಟಪಡಿಸಲಾಗಿದೆ. ಯಾವುದೇ ವ್ಯಕ್ತಿಯ ಹೆಸರನ್ನು ಮತಪಟ್ಟಿಯಿಂದ ಕೈಬಿಡುವ ನಿರ್ಧಾರ ಕೈಗೊಂಡ ತಕ್ಷಣ, ಆ ವ್ಯಕ್ತಿಯ ಪೌರತ್ವವನ್ನು ಪೌರತ್ವ ಕಾಯ್ದೆಯಡಿ ನಿರ್ಧರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದು ಚುನಾವಣಾ ಆಯೋಗದ ಕರ್ತವ್ಯ. ಆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ವ್ಯಕ್ತಿಯ ಪೌರತ್ವ ಯಥಾಸ್ಥಿತಿಯಲ್ಲಿ ಮುಂದುವರೆಯಬೇಕು ಎಂದು ಪೀಠ ತಿಳಿಸಿತು.
ಅಲ್ಲದೆ, ಎಸ್ಐಆರ್ ಪ್ರಕ್ರಿಯೆ ಸಂಬಂಧ, ಮತದಾರರ ಪಟ್ಟಿಯಿಂದ ಡಿಲಿಟ್ ಆದವರಿಗೆ ಎಲ್ಲಾ ಕಲ್ಯಾಣ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬುದನ್ನು ಚುನಾವಣಾ ಆಯೋಗವು ಬಹಿರಂಗಪಡಿಸಿಲ್ಲ ಎಂದು ವಕೀಲರು ತಿಳಿಸಿದರು.
ಅಲ್ಲದೆ, ಜನರ ನಾಗರಿಕ ಹಕ್ಕುಗಳನ್ನು ಒತ್ತಿ ಹೇಳಿದ ವಕೀಲರು, ವಿಚಾರಣೆ ಹಂತದಲ್ಲಿರುವಾಗ ಜನರ ಹಕ್ಕುಗಳನ್ನು ಕಸಿದುಕೊಳ್ಳಬಾರದು ಎಂದು ಮನವಿ ಮಾಡಿದರು.
ಆಗ ಪೀಠವು, "ನಮ್ಮ ತೀರ್ಪು ತುಂಬಾ ಸ್ಪಷ್ಟವಾಗಿದೆ. 9, 10, 11 ಮತ್ತು 12ನೇ ವಿಧಿಗಳ ಅಡಿಯಲ್ಲಿ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ನಿರ್ಧರಿಸಲು ಚುನಾವಣಾ ಆಯೋಗವು ಸಾಂವಿಧಾನಿಕ ಪ್ರಾಧಿಕಾರವಲ್ಲ" ಎಂದು ತಿಳಿಸಿತು.
ಎರಡು ವಿಷಯಗಳು ಮುಖ್ಯ: ಕಾನೂನಿನಲ್ಲಿ ಗೊಂದಲವಿದೆಯೇ ಮತ್ತು ಕಾನೂನು ಸರಿಯಾಗಿ ಜಾರಿಗೆ ಬಂದಿದೆಯೇ? ಎಂಬುದು. ಮೊದಲನೆಯದಾಗಿ, ನಮಗೆ ಯಾವುದೇ ಗೊಂದಲ ಕಾಣುವುದಿಲ್ಲ. ನಮ್ಮ ತೀರ್ಪು ಸ್ಪಷ್ಟವಾಗಿದೆ. ಆಯೋಗವು ಮತದಾರರ ಪಟ್ಟಿಯ ಮೇಲೆ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಬಹುದಾಗಿದೆ. ಅಂದರೆ ದೇಶದ ನಾಗರಿಕರಲ್ಲಿ ಯಾರನ್ನಾದರೂ ಸೇರಿಸದಿರುವ ಬಗ್ಗೆ ಚುನಾವಣಾ ಆಯೋಗ ನಿರ್ಧರಿಸಬಹುದು. ಆದರೆ, ಅದರಿಂದ ಪೌರತ್ವದ ಸ್ಥಾನಮಾನವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ'' ಪೀಠವು ಸ್ಪಷ್ಟಪಡಿಸಿತು.
