ಝೀನತ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಮತ್ತೆರಡು ವಂಚನೆ ಪ್ರಕರಣ ದಾಖಲು !

 


ಉಡುಪಿ: ಕೋಟ್ಯಂತರ ರೂಪಾಯಿ ವಂಚನೆ ಹಾಗೂ ಬ್ಲ್ಯಾಕ್‌ಮೇಲ್ ಆರೋಪಕ್ಕೆ ಗುರಿಯಾಗಿರುವ ಝೀನತ್ (41) ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮತ್ತೆರಡು ಹೊಸ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ದಾಖಲಾದ ಪ್ರಕರಣದ ತನಿಖೆ ವೇಳೆ ಇನ್ನೂ ಹಲವರಿಗೆ ವಂಚನೆ ಮಾಡಿರುವ ಮಾಹಿತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹೊಸ ದೂರುಗಳು ದಾಖಲಾಗಿವೆ.


ಈ ಹಿಂದೆ ಉಡುಪಿ ಮೂಲದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ, ಝೀನತ್ ಇತರರೊಂದಿಗೆ ಸೇರಿ ಹಂತ ಹಂತವಾಗಿ ಸುಮಾರು 70 ಲಕ್ಷ ರೂಪಾಯಿ ಪಡೆದು ದುರುಪಯೋಗಪಡಿಸಿಕೊಂಡಿದ್ದಾಳೆ ಎನ್ನಲಾಗಿದೆ. ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಹಾಗೂ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಸಂಖ್ಯೆ 79/2026 ದಾಖಲಾಗಿ, ಆರೋಪಿತೆಯನ್ನು ಬಂಧಿಸಿ ಪೊಲೀಸ್ ವಶಕ್ಕೆ ಪಡೆದು ತನಿಖೆ ನಡೆಸಲಾಗಿತ್ತು. ತನಿಖೆ ವೇಳೆ ಅಶ್ಲೀಲ ವಿಡಿಯೋಗಳು, ಖಾಸಗಿ ಫೋಟೋಗಳ ಸ್ಕ್ರೀನ್‌ಶಾಟ್‌ಗಳು ಸಂಗ್ರಹಿತವಾಗಿದ್ದ ಪೆನ್‌ಡ್ರೈವ್‌ವನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು.


ಈ ಪ್ರಕರಣದ ಮಾಹಿತಿ ತಿಳಿದ ನಂತರ, ಜುಲೈ 8ರಂದು ಮಣಿಪಾಲ ಮೂಲದ ಮತ್ತೊಬ್ಬರು ದೂರು ನೀಡಿದ್ದು, 2020ರಲ್ಲಿ ತುರ್ತಾಗಿ 50 ಲಕ್ಷ ರೂಪಾಯಿ ಅಗತ್ಯವಿದೆ ಎಂದು ನಂಬಿಸಿ, ಅಲ್ಪಸಂಖ್ಯಾತರ ಯೋಜನೆಯಡಿ ಎರಡು ಕೋಟಿ ರೂಪಾಯಿ ಸಾಲ ಮಂಜೂರಾಗಲಿದೆ ಎಂದು ಹೇಳಿ 148 ಗ್ರಾಂ ಚಿನ್ನವನ್ನು ಅಡವಿಟ್ಟು ಹಣ ಪಡೆದುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ನಂತರ ಸಾಲದ ಕಂತುಗಳನ್ನು ನಿಲ್ಲಿಸಿ ಚಿನ್ನವನ್ನು ಹಿಂದಿರುಗಿಸದೆ, ಹಣ ಕೇಳಲು ಹೋದಾಗ ಕೊಲೆ ಬೆದರಿಕೆಯನ್ನೂ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಠಾಣಾ ಅಪರಾಧ ಸಂಖ್ಯೆ 86/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.


ಅದೇ ದಿನ ಬನ್ನಂಜೆ ಮೂಲದ ಮತ್ತೊಬ್ಬರು ನೀಡಿದ ದೂರಿನಲ್ಲಿ, 2018ರಿಂದ 2022ರ ಅವಧಿಯಲ್ಲಿ ಮೋದಿಕೇರ್ ಕಚೇರಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವಿಡಿಯೋ ಮಾಡಿಕೊಂಡು, ಅದನ್ನು ವೈರಲ್ ಮಾಡುವುದಾಗಿ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಂತ ಹಂತವಾಗಿ ಸುಮಾರು 36.84 ಲಕ್ಷ ರೂಪಾಯಿ ಪಡೆದುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಜೊತೆಗೆ ಮತ್ತೊಬ್ಬ ಆರೋಪಿತೆಯ ಸಹಕಾರದಿಂದ ಸುಮಾರು 15 ಲಕ್ಷ ರೂಪಾಯಿ, ಚಿನ್ನಾಭರಣಗಳು ಹಾಗೂ ಬ್ಯಾಂಕ್ ಚೆಕ್‌ಗಳನ್ನೂ ಪಡೆದು ವಂಚನೆ ನಡೆಸಲಾಗಿದೆ ಎಂದು ದೂರಲಾಗಿದೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಸಂಖ್ಯೆ 88/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಝೀನತ್ ಮತ್ತು ಸಹಚರರ ವಿರುದ್ಧ ಇನ್ನೂ ಹಲವು ಮಂದಿ ವಂಚನೆ ಹಾಗೂ ಬ್ಲ್ಯಾಕ್‌ಮೇಲ್ ಆರೋಪಗಳೊಂದಿಗೆ ಮುಂದೆ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.