ಬಂಟ್ವಾಳದ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಹಗಲು ಹೊತ್ತಿನಲ್ಲೇ ಯುವತಿ ಕೊಲೆ ಖಂಡನೀಯ- ಆಯಿಷಾ ಯಾಸ್ಮಿನ್


 

ಬಂಟ್ವಾಳದ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಯುವತಿಯ ಮೇಲೆ ನಡೆದ ಕ್ರೂರ ಹತ್ಯೆ ಘಟನೆ ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಜನನಿಬಿಡ ಪ್ರದೇಶದಲ್ಲಿ, ಸಾರ್ವಜನಿಕರ ಕಣ್ಣೆದುರೇ ನಡೆದ ಈ ದುರ್ಘಟನೆ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನ್ಯಾಯ ಕೊಡುವವರು ಯಾರು? ನ್ಯಾಯ ಕೊಡಿಸುವವರು ಯಾರು? ಎಂಬ ಪ್ರಶ್ನೆ ಇಂದು ಸಮಾಜದ ಮುಂದೆ ನಿಂತಿದೆ. ಮಹಿಳೆಯರ ಮೇಲಿನ ಹಲ್ಲೆ, ದೌರ್ಜನ್ಯ ಹಾಗೂ ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

ಈ ಪ್ರಕರಣದಲ್ಲಿ ಆರೋಪಿ ಯಾರೆಂಬುದು ತಿಳಿದಿದ್ದರೂ, ಪ್ರಕರಣದ ತನಿಖೆ ತ್ವರಿತಗತಿಯಲ್ಲಿ ಪೂರ್ಣಗೊಂಡು ಆರೋಪಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು. ಪ್ರಕರಣವು ಒಂದು ವಾರದೊಳಗೆ ತನಿಖೆಯ ಸ್ಪಷ್ಟ ಹಂತ ತಲುಪಿ, ನ್ಯಾಯದ ಪ್ರಕ್ರಿಯೆಗೆ ನಾಂದಿ ಹಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ.

ಮಹಿಳೆಯರ ಜೀವ ಮತ್ತು ಸುರಕ್ಷತೆಯನ್ನು ಕಾಪಾಡುವುದು ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸುವುದರ ಜೊತೆಗೆ ಸಮಾಜದಲ್ಲಿ ಮಹಿಳೆಯರ ಭದ್ರತೆಯ ಬಗ್ಗೆ ವಿಶ್ವಾಸ ಮೂಡಿಸುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ.

ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಜಿಲ್ಲೆ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದು, ತಪ್ಪಿತಸ್ಥನಿಗೆ ಶೀಘ್ರ ಹಾಗೂ ಕಠಿಣ ಶಿಕ್ಷೆ ವಿಧಿಸುವಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತದೆ.

– ಆಯಿಷಾ ಯಾಸ್ಮಿನ್ ಜಿಲ್ಲಾಧ್ಯಕ್ಷೆ ವಿಮೆನ್ ಇಂಡಿಯಾ ಮೂವ್ಮೆಂಟ್, ಮಂಗಳೂರು ನಗರ ಜಿಲ್ಲೆ