ಉಡುಪಿ; ಬ್ಲ್ಯಾಕ್ ಮೇಲ್ ಪ್ರಕರಣದ ಆರೋಪಿ ವಿರುದ್ಧ ಮತ್ತೊಂದು ವಂಚನೆ ಪ್ರಕರಣ

 


ಉಡುಪಿ: ಉದ್ಯಮಿಗೆ ಬ್ಲ್ಯಾಕ್‌ಮೆಲ್ ಮಾಡಿರುವ ಪ್ರಕರಣದ ಆರೋಪಿ ಪಡುಬಿದ್ರೆ ಕಂಚಿನಡ್ಕದ ಜೀನತ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.

ಹೆರ್ಗ ತ್ರಿಶಂಕು ನಗರದ ಮೋಹಿನಿ ಶೆಟ್ಟಿಗಾರ್ ಎಂಬವರಿಂದ ಜೀನತ್ ಎಂಬಾಕೆ ತುರ್ತಾಗಿ 50 ಲಕ್ಷ ರೂ. ಹಣದ ಅವಶ್ಯಕತೆ ಇದೆ ಎಂದು ಹೇಳಿ 2020ರ ಆಗಸ್ಟ್ ಮತ್ತು ಅಕ್ಟೋಬ‌ರ್ ತಿಂಗಳಲ್ಲಿ 22,00,000ರೂ. ಮೌಲ್ಯದ ಸುಮಾರು 148 ಗ್ರಾಂ ಚಿನ್ನವನ್ನು ಸುಧೀಂದ್ರ ಫೈನಾನ್ಸ್‌ನಲ್ಲಿ ಅಡವಿಟ್ಟು 4,36,000 ರೂ. ಪಡೆದುಕೊಂಡಿದ್ದರು. ಆ ವೇಳೆ ಜೀನತ್ ಜೊತೆ ಗೀತಾ ರಾವ್ ಕೂಡ ಇದ್ದರು.ನಂತರ ಒಂದೂವರೆ ವರ್ಷದ ವರೆಗೆ ಜೀನತ್ ಸಾಲದ ಕಂತನ್ನು ಕಟ್ಟುತ್ತಿದ್ದು ನಂತರ ಸಾಲವನ್ನು ಕಟ್ಟದೆ ಚಿನ್ನವನ್ನು ಹಿಂತಿರುಗಿಸಿರುವುದಿಲ್ಲ. ಮೋಹಿನಿ, ಜೀನತ್ ಮನೆಗೆ ಹೋದಾಗ ಮನೆಯವರು ಅವಾಚ್ಯ ಶಬ್ದಗಳಿಂದ ಬೈದು ಪೊಲೀಸ್‌ ದೂರು ನೀಡಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಜೀನತ್, ಮೋಹಿನಿ ಅವರಿಗೆ 50 ಲಕ್ಷ ಕೊಡುವುದಾಗಿ ಅಮಿಷ ಒಡ್ಡಿ ನಂಬಿಸಿ 148 ಗ್ರಾಂ ಚಿನ್ನವನ್ನು ಪಡೆದು ಅಡವಿರಿಸಿ ಮೋಸದಿಂದ ಹಣಪಡೆದು ವಾಪಾಸು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.

ಆರೋಪಿ ಜೀತನ್‌ನನ್ನು ಉಡುಪಿ ನಗರ ಪೊಲೀಸರು ಜು.2ರಂದು ಬಂಧಿಸಿದ್ದು, ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.