ಉಡುಪಿ:ಗ್ಯಾಸ್ ದರ ಏರಿಕೆ- ಜಿಲ್ಲಾ ಕಾಂಗ್ರೆಸ್ ನಿಂದ ರಸ್ತೆಯಲ್ಲೇ ಚಹಾ ತಯಾರಿಸಿ ಪ್ರತಿಭಟನೆ




ಉಡುಪಿ: ಕೇಂದ್ರ ಸರ್ಕಾರ ಅಡುಗೆ ಸಿಲಿಂಡರ್ ಮತ್ತು ವಾಣಿಜ್ಯ ಸಿಲಿಂಡರ್ ಗಳ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಇವತ್ತು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಜಿಲ್ಲಾ ಕಾಂಗ್ರೆಸ್ ಭವನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಬ್ರಹ್ಮಗಿರಿ ಸರ್ಕಲ್ ಗೆ ಸಾಗಿದ ಕಾರ್ಯಕರ್ತರು ಅಲ್ಲಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸಂದರ್ಭ ಕಾಂಗ್ರೆಸ್‌ ನ ಮಹಿಳಾ ಕಾರ್ಯಕರ್ತೆಯರು ರಸ್ತೆಯಲ್ಲೇ ಒಲೆ ಹಾಕಿ ಚಹಾ ತಯಾರಿಸಿ ಅದನ್ನು ಹಂಚುವ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಿದರು. ದೇಶದಲ್ಲಿ ಗ್ಯಾಸ್ ದರ ಸಣ್ಣ ಪ್ರಮಾಣದಲ್ಲಿ ಏರಿಕೆಯಾದರೂ ತೀವ್ರ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ಪಕ್ಷ , ಇವತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಅಡುಗೆ ಸಿಲಿಂಡರ್ ಗೆ 60 ರೂ. ಮತ್ತು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು 115 ಗಳಿಗೆ ಏರಿಸಿದೆ.ದೇಶದ ಕೋಟ್ಯಂತರ ಜನರು ಇದರಿಂದ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ.ವಾಣಿಜ್ಯ ಸಿಲಿಂಡರ್ ಗಳ ಬೆಲೆ ತೀವ್ರ ಏರಿಕೆಯಿಂದಾಗಿ ಇವತ್ತು ಹೋಟೆಲ್ ಉದ್ಯಮ ನೆಲಕಚ್ಚುವ ಭೀತಿ ಎದುರಾಗಿದೆ.ಆದರೂ ಕೇಂದ್ರ ಸರ್ಕಾರ ಜನರ ಮೇಲೆ ಕಿಂಚಿತ್ತೂ ಕರುಣೆ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಗ್ಯಾಸ್ ಸಿಲಿಂಡರ್ ನಲ್ಲಿ ಪ್ರಧಾನಿ ಮೋದಿ ,ಅಮಿತ್ ಷಾ ಮತ್ತು ನಿರ್ಮಲಾ ಸೀತಾರಾಮನ್ ಅವರ ಭಾವಚಿತ್ರಗಳನ್ನಿಟ್ಟು  ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದರಿಂದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಸುಮಾರು ಅರ್ಧ ತಾಸು ಸಂಚಾರ ಅಸ್ತವ್ಯಸ್ತಗೊಂಡಿತು.





 ​ಪ್ರತಿಭಟನೆಯ ಮುಖ್ಯಾಂಶಗಳು

ಬೆಲೆ ಏರಿಕೆ ವಾಪಸ್ ಪಡೆಯಲು ಆಗ್ರಹ: ಬಡ ಮತ್ತು ಮಧ್ಯಮ ವರ್ಗದವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಬೆಲೆ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು.

ಸಾಮಾನ್ಯರ ಆಕ್ರೋಶ: ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮೇಲೂ ಈ ದರ ಏರಿಕೆ ಪರಿಣಾಮ ಬೀರುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ.

ಒಗ್ಗಟ್ಟಿನ ಹೋರಾಟ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷರು ಶ್ರೀಮತಿ ಜ್ಯೋತಿ ಹೆಬ್ಬಾರ್ ,ಅವರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ಬಿಜೆಪಿ ಸರ್ಕಾರದ ಧೋರಣೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಸಹಿಸುವುದಿಲ್ಲ. ನಮ್ಮ ಹೋರಾಟ ಜನಸಾಮಾನ್ಯರ ಹಿತಕ್ಕಾಗಿ ನಿರಂತರವಾಗಿ ಮುಂದುವರಿಯಲಿದೆ ಎಂದು ನಾಯಕರು ತಿಳಿಸಿದರು. ಜಿಲ್ಲಾಧ್ಯಕ್ಷ ಅಶೋಕ್ ಕೊಡವರು, ಎಂ ಎ. ಗಪೂರ್, ಹರೀಶ್ ಕಿಣಿ, ಜ್ಯೋತಿ ಹೆಬ್ಬಾರ್, ವೆರೋನಿಕ ಕರ್ನಾಲಿಯೋ ,ಸರ್ಫುದ್ದೀನ್ ,ಸತೀಶ್ ಕೊಡವೂರು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.