ನವದೆಹಲಿ:ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿನ ಸಂಘರ್ಷದಿಂದಾಗಿ ಹೆಚ್ಚುತ್ತಿರುವ ಇಂಧನ ವೆಚ್ಚದ ಮಧ್ಯೆ, ಗೃಹ ಬಳಕೆಯ ಎಲ್ಪಿಜಿ ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್ಗೆ 60 ರೂ. ಮತ್ತು ವಾಣಿಜ್ಯ ಸಿಲಿಂಡರ್ಗೆ 114.5 ರೂ.ಗಳಷ್ಟು ಹೆಚ್ಚಳವಾಗಿದೆ.
ಉಜ್ವಲ ಫಲಾನುಭವಿಗಳನ್ನು ಹೊರತುಪಡಿಸಿ ಸಾಮಾನ್ಯ ಗೃಹಬಳಕೆದಾರರು ತಮ್ಮ ಅಡುಗೆಮನೆಗಳಲ್ಲಿ ಬಳಸುವ ಸಬ್ಸಿಡಿ ರಹಿತ ಎಲ್ಪಿಜಿ 14.2 ಕೆಜಿ ಸಿಲಿಂಡರ್ಗೆ, ದೆಹಲಿಯಲ್ಲಿ 913 ರೂ.ಗಳಿಗೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ವೆಬ್ಸೈಟ್ ತಿಳಿಸಿದೆ. ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಇದು ಎರಡನೇ ಬಾರಿ ಬೆಲೆ ಏರಿಕೆಯಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದ ಮಿಲಿಟರಿ ಸಂಘರ್ಷದ ನಂತರ ಜಾಗತಿಕ ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ಕೈಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆಯಾದರೂ, ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅಡುಗೆ ಅನಿಲದ ಬೆಲೆ ಅತ್ಯಂತ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ವೆಬ್ಸೈಟ್ನಲ್ಲಿ ತಿಳಿಸಿರುವಂತೆ ಪರಿಷ್ಕೃತ ದರ ಮಾರ್ಚ್ 7 ಅಂದರೆ ಇಂದಿನಿಂದಲೇ ಜಾರಿಗೆ ಬರಲಿದೆ.
