
ಧರ್ಮಸ್ಥಳ: ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ವಿರುದ್ಧ ಎಫ್ ಐ ಆರ್
ಧರ್ಮಸ್ಥಳ: ಧರ್ಮಸ್ಥಳ ಪ್ರಕರಣದಲ್ಲಿ ಬೈಟ್ ಕೇಳಲು ಹೋದಾಗ ತಮ್ಮ ಸಿಬ್ಬಂದಿಗಳ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು ಹಲ್ಲೆ ನಡೆಸಿದ್ದಾರೆ ಎಂದು ವರದಿ ಮಾಡಿದ್ದ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ್ ಸೇರಿ ಮೂವರ ವಿರುದ್ಧ ದೂರು ದಾಖಲಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬುಧವಾರ, ನಾಲ್ವರು ಯೂಟ್ಯೂಬರ್‌ಗಳ ಮೇಲೆ ಧರ್ಮಸ್ಥಳದ ಗೂಂಡಾಗಳು ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಯೂಟ್ಯೂಬರ್‌ಗಳನ್ನು ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳನ್ನು ನೋಡಲು ಬಂದಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಅವರನ್ನು ಸುವರ್ಣ ನ್ಯೂಸ್‌ನ ವರದಿಗಾರ ಮತ್ತು ಕ್ಯಾಮೆರಾಮನ್ ಬೈಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ, ತಿಮರೋಡಿ ಮತ್ತು ಗಿರೀಶ್ ಬೈಟ್ ನೀಡಲು ನಿರಾಕರಿಸಿದ್ದರು ಎಂದು ವರದಿಯಾಗಿದೆ.
ಬೈಟ್ ನೀಡಲು ನಿರಾಕರಿಸಿದ ಬಗ್ಗೆ ಸುದ್ದಿ ಮಾಡಿದ್ದ ಸುವರ್ಣ ನ್ಯೂಸ್, ಬೈಟ್ ಕೇಳಿದ್ದಕ್ಕೆ ತಮ್ಮ ವರದಿಗಾರ ಮತ್ತು ಕ್ಯಾಮೆರಾಮನ್ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿತ್ತು. ಮಾತ್ರವಲ್ಲದೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುವರ್ಣ ನ್ಯೂಸ್ ಸಿಬ್ಬಂದಿಗಳು ದೂರು ದಾಖಲಿಸಿದ್ದರು.ಸುವರ್ಣ ನ್ಯೂಸ್ ಮಾಡಿರುವ ಆರೋಪ ಮತ್ತು ಪ್ರಕಟಿಸಿರುವ ಸುದ್ದಿ ಸುಳ್ಳು ಎಂದು ತಿಮರೋಡಿ ಬೆಂಬಲಿಗರು ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲದೆ, ತಿಮರೋಡಿ ಅವರ ಬೆಂಬಲಿಗ ಗಣೇಶ್ ಶೆಟ್ಟಿ ಎಂಬವರು ಅಜಿತ್ ಹನುಮಕ್ಕನವರ್, ವರದಿಗಾರ ಮತ್ತು ಕ್ಯಾಮೆರಾಮನ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.