
ಚಿಕ್ಕಬಳ್ಳಾಪುರ: ಕಾರು ಚಾಲಕ ಆತ್ಮಹತ್ಯೆ ಕೇಸ್- ಸಂಸದ ಸುಧಾಕರ್ ವಿರುದ್ಧ ಎಫ್ ಐ ಆರ್
ಚಿಕ್ಕಬಳ್ಳಾಪುರ: ಕಾರು ಚಾಲಕ ಬಾಬು ಆತ್ಮಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರನ್ನು ಮೊದಲ ಆರೋಪಿಯಾಗಿ ಪೊಲೀಸರು ಹೆಸರಿಸಿದ್ದು, ಅಟ್ರಾಸಿಟಿ ಪ್ರಕರಣವನ್ನೂ ದಾಖಲು ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಬೆಳಗ್ಗೆ ಗೌರಿಬಿದನೂರು ತಾಲೂಕಿನ ಇಡುಗೂರು ಗ್ರಾಮದ ನಿವಾಸಿ ಬಾಬು (32) ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದರು.ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ ಬಾಬುಗೆ ಹುದ್ದೆ ಖಾಯಂ ಮಾಡಿ ಕೊಡುತ್ತೇವೆಂದು ಲಕ್ಷಾಂತರ ರೂ ಹಣ ತೆಗೆದುಕೊಂಡು ಮೋಸ ಮಾಡಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ಡೆತ್ ನೋಟ್ ನಲ್ಲಿ ನನ್ನ ಸಾ*ವಿಗೆ ಸಂಸದ ಸುಧಾಕರ್ ಕಾರಣ, ನಾಗೇಶ್, ಜಿಲ್ಲಾ ಪಂಚಾಯತ್ ಲೆಕ್ಕ ಪರಿಶೋಧಕ ವಿಭಾಗದ ಎಸ್ ಡಿ ಎ ಮಂಜುನಾಥ್ ಹೆಸರನ್ನು ಉಲ್ಲೇಖಿಸಿರುವ ಕಾರಣ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಬಾಬು ಪತ್ನಿ ನೀಡಿದ ದೂರಿನ ಅನ್ವಯ ಡಾ.ಕೆ.ಸುಧಾಕರ್, ನಾಗೇಶ್ ಮತ್ತು ಮಂಜುನಾಥ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.