
ಬೆಂಗಳೂರು: ನಾಳೆ ಒಂದು ದಿನ ಮುಷ್ಕರ ಕೈಬಿಡಿ: ಸಾರಿಗೆ ನೌಕರರಿಗೆ ಹೈಕೋರ್ಟ್ ಆದೇಶ
ಬೆಂಗಳೂರು: ಸಾರಿಗೆ ನೌಕರರು ಆಗಸ್ಟ್ 5ರಂದು ರಾಜ್ಯಾದ್ಯಂತ ಮುಷ್ಕರ ನಡೆಸಲು ಕರೆ ನೀಡಿದ್ದರು. ಇದೀಗ ನಾಳೆ ಒಂದು ದಿನದ ಮಟ್ಟಿಗೆ ಮುಷ್ಕರ ಕೈಬಿಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನೌಕರರ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಗೆ ಕರ್ನಾಟಕ ಹೈಕೋರ್ಟ್ ಇಂದು ನಿರ್ದೇಶನ ನೀಡಿದೆ. ನಾಳಿನ ಮುಷ್ಕರ ಸಂಬಂಧ ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಲಾಗಿತ್ತು. ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನಾಳೆ ಮುಷ್ಕರ ನಡೆಸದಂತೆ ಆದೇಶಿಸಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಮುಷ್ಕರ ನಡೆದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಹೇಳಿರುವ ಹೈಕೋರ್ಟ್ ಸರ್ಕಾರ, ಸಾರಿಗೆ ನಿಗಮಗಳಿಗೆ ನೋಟಿಸ್ ನೀಡಿದೆ.
ಮುಷ್ಕರದಿಂದಾಗಿ ಪ್ರಯಾಣಿಕರಿಗೆ ಆಗಬಹುದಾದ ತೊಂದರೆಯನ್ನು ತಪ್ಪಿಸಲು ಹೈಕೋರ್ಟ್ ಮಧ್ಯಪ್ರವೇಶಿಸುವಂತೆ ಕೋರಿ ಸುನಿಲ್ ಜೆ ಮತ್ತು ಇತರ ನಾಲ್ವರು ವಕೀಲರಾದ ದೀಕ್ಷಾ ಎನ್ ಅಮೃತೇಶ್ ಮೂಲಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನಂತರ ನ್ಯಾಯಮೂರ್ತಿ ಕೆ ಎಸ್ ಮುದಗಲ್ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ವಿಭಾಗೀಯ ಪೀಠವು ಮಧ್ಯಂತರ ಆದೇಶವನ್ನು ನೀಡಿದೆ.