ಉಡುಪಿ: ನಗರದಲ್ಲಿ ವಿಚಿತ್ರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯೇ ಪತಿಯ ಲಾಕರ್ ಕೀ ಕಳವು ಮಾಡಿ ಲಕ್ಷಾಂತರ ಮೌಲ್ಯದ ಚಿನ್ನ ದೋಚಿರುವ ಘಟನೆ ದಾಖಲಾಗಿದೆ. ಉಚ್ಚಿಲ ಕಾಪು ನಿವಾಸಿ ಕಿರಣ್ ಕುಮಾರ್ (42), ಪಡುಬಿದ್ರಿಯ ಎಸ್‌ಇಝೆಡ್ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರಲ್ಲಿ ವನಿತಾ ಅವರೊಂದಿಗೆ ವಿವಾಹವಾದ ಇವರ ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ, ಪ್ರಸ್ತುತ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಪಿರ್ಯಾದಿದಾರರು ತಮ್ಮ ದಾಖಲೆಗಳು ಹಾಗೂ ಐಡಿಬಿಐ ಬ್ಯಾಂಕ್ ಉಡುಪಿ ಶಾಖೆಯ ಲಾಕರ್ ಕೀ ಯನ್ನು ಮನೆಯ ಅಲ್ಮಾರಿಯಲ್ಲಿ ಇಟ್ಟಿದ್ದರು. ಏಪ್ರಿಲ್ 10ರಂದು ಕೆಲಸಕ್ಕೆ ತೆರಳಿದ್ದ ವೇಳೆ, ಮಧ್ಯಾಹ್ನ ಸುಮಾರು 2 ಗಂಟೆಗೆ ವನಿತಾ ಅವರು ಕೀ ಮೇಕರ್ ಸಹಾಯದಿಂದ ಅಲ್ಮಾರಿನ ಕೀ ಒಡೆದು ಅದರೊಳಗಿದ್ದ ಲಾಕರ್ ಕೀ ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನಂತರ ಆ ಕೀ ಬಳಸಿ ಐಡಿಬಿಐ ಬ್ಯಾಂಕ್ ಉಡುಪಿ ಶಾಖೆಯ ಲಾಕರ್ ತೆರೆಯಿಸಿ, ಸುಮಾರು 169 ಗ್ರಾಂ ಚಿನ್ನ ಅಂದಾಜು ಮೌಲ್ಯ ರೂ. 23.67 ಲಕ್ಷ ಕಳವು ಮಾಡಿಕೊಂಡು ಹೋಗಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವನಿತಾ ವಿರುದ್ಧ ತನಿಖೆ ಮುಂದುವರಿದಿದೆ.
