ಕಾರ್ಕಳ: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಕಲಾವಿದೆ , ಆರೋಪಿ ಸೌಮ್ಯ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ದೂರುದಾರ ಬಿ. ದಾಮೋದರ (62) ಎಂಬುವರ ಮಗ ಸುದೀಪ್ , ಕುಕ್ಕುಂದೂರು ಹಿಮ್ಮುಂಜೆ ಕಜೆ ನಿವಾಸಿ ಸೌಮ್ಯ ಶೆಟ್ಟಿ ಅವರನ್ನು ದಿನಾಂಕ 17.02.2026 ರಂದು ಪುತ್ತೂರು ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹವಾಗಿದ್ದರು. ಬಳಿಕ ದಂಪತಿ ಕಾರ್ಕಳ ತಾಲೂಕು ಜೋಡುರಸ್ತೆ ಸಮೀಪ ಬಂಗ್ಲೆಗುಡ್ಡೆ ಕಜೆ ಪ್ರದೇಶದಲ್ಲಿ ವಾಸವಾಗಿದ್ದರು.
ದಿನಾಂಕ 17.03.2026 ರಂದು ಸುದೀಪ್ ಅವರು ತಮ್ಮ ತಾಯಿಯೊಂದಿಗೆ ಕಾರಿನಲ್ಲಿ ಪೂಜಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ, ನೆಲ್ಯಾಡಿ ಪೇಟೆ ಸಮೀಪ ಸೌಮ್ಯ ಶೆಟ್ಟಿ ಸ್ಕೂಟಿಯಲ್ಲಿ ಬಂದು ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ.
ಮುಂದೆ ದಿನಾಂಕ 22.03.2026 ರಂದು ಸೌಮ್ಯ ಶೆಟ್ಟಿ ಅವರ ಸಂಬಂಧಿಕರಿಗೆ ಕರೆ ಮಾಡಿ, ಸುದೀಪ್ ವಿಷ ಸೇವಿಸಿದ್ದಾಗಿ ತಿಳಿಸಿದ್ದಾಳೆ. ನಂತರ ಸುದೀಪ್ ಅವರನ್ನು ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆ, ಉಡುಪಿ ಆದರ್ಶ ಆಸ್ಪತ್ರೆ ಹಾಗೂ ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 29.03.2026 ರಂದು ಸುದೀಪ್ ಮೃತಪಟ್ಟಿದ್ದಾರೆ. ಸುದೀಪ್ ಪೋಷಕರು ನೀಡಿದ
ದೂರಿನಲ್ಲಿ ಸೌಮ್ಯ ಶೆಟ್ಟಿ ಮಾನಸಿಕ ಹಿಂಸೆ ನೀಡಿ ಸುದೀಪ್ ಅವರನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾಗಿ ಆರೋಪಿಸಲಾಗಿದೆ.
ಈ ಪ್ರಕರಣದ ತನಿಖೆಯನ್ನು ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು , ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
