ಉಡುಪಿ: ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ಮಕರಸಂಕ್ರಾಂತಿ ನಿಮಿತ್ತ ಬುಧವಾರ ಸಂಜೆ ಸಂಭ್ರಮದ ಬ್ರಹ್ಮರಥ ಸಹಿತ ಮೂರುತೇರು ಉತ್ಸವ ನಡೆಯಿತು.
ಆಚಾರ್ಯ ಮಧ್ವರು ಮಕರ ಸಂಕ್ರಮಣದಂದು ಶ್ರೀಕೃಷ್ಣನ ಪ್ರತಿಷ್ಠಾಪನೆ ನಡೆಸಿದರು ಎಂಬ ಐತಿಹ್ಯದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮಹಾಭಿಷೇಕ ಸಹಿತ ವಿಶೇಷ ಪೂಜೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ನೆರವೇರಿಸಿದರು. ಏಕಾದಶಿ ಹಿನ್ನೆಲೆಯಲ್ಲಿ ಪ್ರಸಾದ ಭೋಜನ ವ್ಯವಸ್ಥೆ ಇರಲಿಲ್ಲ.
ಸಂಜೆ ಪರ್ಯಾಯ ಪುತ್ತಿಗೆ ಶ್ರೀಪಾದರ ನೇತೃತ್ವದಲ್ಲಿ ಮುಹೂರ್ತ ನಡೆದಿದ್ದು, ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸಿದ್ದರು. ಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮುಹೂರ್ತ ಸಂದರ್ಭದಲ್ಲಿ ಉಪಸ್ಥಿತರಿದ್ದರು.





