ಉಡುಪಿ: ಜಿಲ್ಲೆಯಲ್ಲಿ ಕಲ್ಲು ಮಣ್ಣು ಜಲ್ಲಿ ಮರಳುಗಳನ್ನು ಸಾಗಿಸುವ ವಾಹನಗಳ ತಪಾಸಣೆಯನ್ನು ಪೊಲೀಸರು ಬಿಗಿಗೊಳಿಸಿದ್ದಾರೆ. ಈತನಕ 832 ವಾಹನಗಳನ್ನು ಪರಿಶೀಲಿಸಲಾಗಿದ್ದು, 182 ವಾಹನಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಓವರ್ ಲೋಡ್ ಹಾಗೂ ಇತರೆ ಅಪರಾಧಗಳಿಗಾಗಿ 66 ವಾಹನಗಳಿಂದ 22,500 ರೂ.ದಂಡ ವಸೂಲಿ ಮಾಡಲಾಗಿದೆ. ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ಒಂದು ವಾಹನದ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು, 27 ವಾಹನಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಕಳೆದ ಒಂದು ವಾರದಿಂದ(08/01/26 ರಿಂದ 14/01/26) ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವ ಕುರಿತು ಮಾಹಿತಿ ನೀಡುವ ಸಲುವಾಗಿ ಕರಪತ್ರಗಳನ್ನು ಹಂಚುವುದರ ಮೂಲಕ ಮಾಹಿತಿ ನೀಡಲಾಗುತ್ತಿದೆ. ಈಗಾಗಲೇ 163 ವಾಹನಗಳಿಗೆ ಸ್ಪೀಡ್ ಗವರ್ನರ್ ಅನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
