ಮೂಡುಬಿದಿರೆ: ಧರ್ಮಸ್ಥಳ ಮೇಲಿನ ಎಲ್ಲಾ ಆರೋಪಗಳು ಸತ್ಯಕ್ಕೆ ದೂರ- ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ

ಮೂಡುಬಿದಿರೆ: ಧರ್ಮಸ್ಥಳ ಮೇಲಿನ ಎಲ್ಲಾ ಆರೋಪಗಳು ಸತ್ಯಕ್ಕೆ ದೂರ- ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ

 


ಮೂಡುಬಿದಿರೆ: ಧರ್ಮಸ್ಥಳದಲ್ಲಿ ಸೌಜನ್ಯ ಸಹಿತ ಹತ್ಯೆಗೀಡಾದ ಯುವತಿಯರಿಗೆ ನ್ಯಾಯ ಸಿಗಬೇಕು. ಆದರೆ, ಮಹಿಳೆಯರ ಸಾವಿನ ಹೆಸರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರ, ಸಹಸ್ರಾರು ರೀತಿಯಲ್ಲಿ ಸಾರ್ವಜನಿಕ ಸೇವಾ ಕಾರ್ಯ ನಡೆಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ದ ನಡೆಸುವ ಅಪಪ್ರಚಾರವನ್ನು ಕೂಡಲೇ ನಿಲ್ಲಿಸಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಒತ್ತಾಯಿಸಿದರು.

ಮೂಡುಬಿದಿರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಧರ್ಮಸ್ಥಳ ದೇವಸ್ಥಾನ, ಅದರ ಆಡಳಿತ ಮಂಡಳಿ ಅಥವಾ ಅವರ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಅತ್ಯಾಚಾರ ಅಥವಾ ಕೊಲೆ ಘಟನೆ, ದೇವಸ್ಥಾನದ ಆವರಣದಲ್ಲಿ ಅಥವಾ ಅದರ ಸುತ್ತಮುತ್ತ ನಡೆದಿದೆಯೆಂದು ಆರೋಪಿಸುತ್ತಿರುವವರು, 2025 ರ ಡಿಸೆಂಬ‌ರ್ 31ರೊಳಗೆ ಅದಕ್ಕೆ ಸಂಬಂಧಪಟ್ಟ ಸ್ಪಷ್ಟವಾದ ಸಾಕ್ಷ್ಯವನ್ನು ಸಲ್ಲಿಸಬೇಕು. ಒಂದು ವೇಳೆ ಆರೋಪ ಮಾಡುತ್ತಿರುವವರು ಸಾಕ್ಷ್ಯ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ಧರ್ಮಸ್ಥಳದ ವಿರುದ್ಧ ನಡೆಸುತ್ತಿರುವ ಎಲ್ಲಾ ಆರೋಪಗಳು

ಸತ್ಯಕ್ಕೆ ದೂರವಾದುದು ಹಾಗೂ “ಧರ್ಮಸ್ಥಳ ದೇವಸ್ಥಾನ ವಿರುದ್ಧ ನಡೆಸುತ್ತಿರುವ ಸುಳ್ಳು ಆರೋಪಗಳ ಪ್ರಕರಣವನ್ನು ಮುಚ್ಚಲಾಗಿದೆ' ಎಂದು ರಾಜ್ಯದ ಗೃಹ ಸಚಿವರು ಅಧಿಕೃತವಾಗಿ ಘೋಷಿಸಬೇಕು ಎಂಬ ಬೇಡಿಕೆ ಮಂಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರವನ್ನು ಕೆಲವರು ಉದ್ದೇಶಪೂರ್ವಕವಾಗಿ ಭಾರತ ಹಾಗೂ ವಿಶ್ವಾದ್ಯಂತ ತಪ್ಪಾಗಿ ಬಿಂಬಿಸುತ್ತಿದ್ದಾರೆ. ಆದ್ದರಿಂದ ಊಹಾಪೋಹಗಳಿಗೆ ಶೀಘ್ರವೇ ತೆರೆ ಎಳೆಯಬೇಕು. ಈ ಪ್ರಕರಣದ ಹೆಸರಿನಲ್ಲಿ ಕರಾವಳಿ ಜಿಲ್ಲೆಗೆ ಕೆಟ್ಟ ಹೆಸರು ತರಲಾಗುತ್ತಿದೆ ಎಂದು ಅವರು ಹೇಳಿದರು.

ಈ ಅಪಪ್ರಚಾರವನ್ನು ಯಾರೂ ಕೂಡ ನಂಬಬಾರದು. ದೇವಳದ ಭಕ್ತರು ಕಳೆದ ಸಾವಿರ ವರ್ಷಗಳಿಂದ ಈ ಕ್ಷೇತ್ರದ ಮೇಲೆ ಅಚಲವಾದ ನಂಬಿಕೆಯನ್ನು ಹೊಂದಿದ್ದಾರೆ. ಈ ನಂಬಿಕೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾ‌ರ್ ಶೆಟ್ಟಿ, ರಾಜ್ಯ ಸಂಯೋಜಕ ಜಗದೀಶ ಅಧಿಕಾರಿ, ಜಿಲ್ಲಾ ಉಪಾಧ್ಯಕ್ಷ ಅರುಣ ಪ್ರಕಾಶ್ ಶೆಟ್ಟಿ, ರಾಜೇಶ್ ಶೆಟ್ಟಿ ಮಾಣಿಗುತ್ತು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article