
ಉಡುಪಿ: ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಹೊಸ ಕ್ರಮ- ಸ್ಕ್ಯಾನ್ ಮಾಡಿ ಮಾಹಿತಿ ನೀಡಲು ಅವಕಾಶ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು, ಯುವ ಸಮುದಾಯವನ್ನೇ ಗುರಿಯಾಗಿರಿಸಿಕೊಂಡು ಸಕ್ರಿಯವಾಗಿರುವ ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಉಡುಪಿ ಜಿಲ್ಲಾ ಪೊಲೀಸ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಸಾರ್ವಜನಿಕರು ಈ ದಂಧೆಯ ಬಗ್ಗೆ ಅನಾಮಧೇಯವಾಗಿ ಮಾಹಿತಿ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಕ್ಯೂಆರ್ ಕೋಡ್‌ನ್ನು ರಚಿಸಿದೆ.
ಅಕ್ರಮ ಡ್ರಗ್ಸ್ ಹಾಗೂ ಸಿಗರೇಟ್ ಮಾರಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅನಾಮಧೇಯರಾಗಿ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿ ಈ ಮೂಲಕ ಮಾಹಿತಿ ನೀಡಬಹುದಾಗಿದೆ. ಸ್ಕ್ಯಾನ್ ಮಾಡಿದಾಗ ಒಟ್ಟು 15 ಹಂತ ಗಳು ಬರಲಿದ್ದು, ಅದನ್ನು ಸಾರ್ವಜನಿಕರು ಅನುಸರಿಸಿ ಆಯ್ಕೆ ಮಾಡಿ ವರದಿ ಮಾಡಬೇಕು. ಆ ಮೂಲಕ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಬಹುದು.
ಮೊದಲ ಹಂತದಲ್ಲಿ ನೀವು ಏನು ವರದಿ ಮಾಡುತ್ತಿದ್ದೀರಿ ಎಂಬುದಕ್ಕೆ ಸೂಕ್ತವಾಗಿರುವುದನ್ನು ಆಯ್ಕೆ ಮಾಡಬೇಕು. ಮುಂದಿನ ವಿವಿಧ ಹಂತಗಳಲ್ಲಿ, ಅಕ್ರಮ ಮಾದಕ ವಸ್ತುಗಳ ಬಳಕೆ ಎಲ್ಲಿ ನಡೆಯುತ್ತಿದೆ, ಕಾಲೇಜು, ಸ್ನಾತಕೋತ್ತರ ಪದವಿ ಸಂಸ್ಥೆಯ ಹೆಸರು ಹಾಗೂ ಅಲ್ಲಿ ಏನು ನಡೆಯುತ್ತಿದೆ ಎಂಬುದರ ವಿವರ ನೀಡಬಹುದು.
ಮಾದಕ ವಸ್ತು ಮಾರಾಟ ಅಥವಾ ವಿತರಣೆಯಲ್ಲಿ ತೊಡಗಿರುವವರ ಹೆಸರು ತಿಳಿದಿದ್ದರೆ ವಿವರಣೆ ನೀಡಬಹುದು. ಮಾರಾಟ ಮಾಡುವವರ ಗುಂಪು, ನೆಟ್‌ವರ್ಕ್‌ಗಳ ಬಗ್ಗೆಯೂ ಮಾಹಿತಿ ಕೊಡಬಹುದು. ಅಲ್ಲಿ ಯಾವ ರೀತಿಯ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ತಿಳಿಸಬಹುದು.
ಒಂದು ವೇಳೆ ತಮಗೆ ಮಾದಕ ವ್ಯಸನಕ್ಕೆ ಒಳಗಾಗಿರುವ ತಮ್ಮ ಆಪ್ತರನ್ನು ಸಮಾಲೋಚನೆ ಮಾಡಬೇಕಿದ್ದಲ್ಲಿಯೂ ಮಾಹಿತಿ ಹಂಚಿಕೊಳ್ಳಬಹುದು. ಅಗತ್ಯಕ್ಕೆ ಸ್ನೇಹಿತರ ವಿವರ ನೀಡಬಹುದು. ಆ ವ್ಯಕ್ತಿಯ ವಿರುದ್ಧ ಪೊಲೀಸ್ ಕ್ರಮ ತೆಗೆದುಕೊಳ್ಳಬೇಕೆ ಅಥವಾ ಸಮಾಲೋಚನೆ ಮಾತ್ರ ಮಾಡಿದರೆ ಸಾಕೇ ಎಂಬುದರ ಮಾಹಿತಿ ಕೂಡ ತಿಳಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.