ಹೆಬ್ರಿ: ಮನೆಗೆ ನುಗ್ಗಿ 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳರು

 

ಸಾಂದರ್ಭಿಕ ಚಿತ್ರ


ಹೆಬ್ರಿ: ಹೆಬ್ರಿ ಗ್ರಾಮದ ಕೀರ್ತನ ಪ್ರಭು (34) ಎಂಬವರ ಮನೆಯಲ್ಲಿ ಭಾರೀ ಕಳ್ಳತನ ನಡೆದಿದ್ದು, ಸುಮಾರು ₹59.97 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.

ಕೀರ್ತನ ಪ್ರಭು ಅವರು ಬೆಳಿಗ್ಗೆ 6:45 ಗಂಟೆಗೆ ಎದ್ದು ನೋಡಿದಾಗ ಮನೆಯ ಹಿಂಭಾಗ ಹಾಗೂ ಎದುರಿನ ಬಾಗಿಲುಗಳು ತೆರೆದಿರುವುದು ಗಮನಕ್ಕೆ ಬಂದಿದೆ. ಹಾಲ್ ಬಳಿ ಇದ್ದ ಗೋದ್ರೇಜ್ ಬಾಗಿಲು ಕೂಡ ತೆರೆಯಲ್ಪಟ್ಟಿದ್ದು, ಅನುಮಾನಗೊಂಡ ಅವರು ಮನೆಯ ಮೊದಲ ಮಹಡಿಯ ಮಲಗುವ ಕೋಣೆಗೆ ತೆರಳಿ ಪರಿಶೀಲಿಸಿದಾಗ ಕಬ್ಬಿಣದ ಗೋದ್ರೇಜ್ ಲಾಕರ್ ತೆರೆಯಲ್ಪಟ್ಟಿರುವುದು ಕಂಡುಬಂದಿದೆ. ಕಳ್ಳರು ಮನೆಯ ಹಿಂಭಾಗದ ಕಿಟಕಿಯ ಚಿಲಕದ ಕೊಂಡಿಯನ್ನು ಮೀಟಿ ಒಳನುಗ್ಗಿ, ಮೊದಲ ಮಹಡಿಯಲ್ಲಿ ಇರಿಸಿದ್ದ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಹೆಬ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2026ರಂತೆ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(4), 305 ಅಡಿಯಲ್ಲಿ ತನಿಖೆ ಮುಂದುವರಿದಿದೆ.