ಮಣಿಪಾಲ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದಲ್ಲಿ ಲಾಭ ತೆಗೆಸಿಕೊಡುವುದಾಗಿ ನಂಬಿಸಿ ಮಂಗಳೂರು ಮೂಲದ ವ್ಯಕ್ತಿಯೋರ್ವರಿಗೆ 3.50 ಲಕ್ಷ ರೂ. ಮೋಸ ಮಾಡಿದ ಘಟನೆಗೆ ಸಂಬಂಧಿಸಿ ಮಣಿಪಾಲದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಮೂಲದ ಗಣೇಶ್ ಪಿ.ಎಲ್. ಪ್ರಕರಣದಲ್ಲಿ ವಂಚನೆಗೊಳಗಾದವರು. ಆರೋಪಿಗಳಾದ ಅರವಿಂದ ನಾಯಕ್ ಹಾಗೂ ಹರೀಶ್ ಎಂಬವರು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದಲ್ಲಿ ಲಾಭ ತೆಗೆಯಿಸಿಕೊಡುವುದಾಗಿ ಗಣೇಶ್ ಅವರನ್ನು ಮಣಿಪಾಲದಲ್ಲಿ ಭೇಟಿಯಾಗಿ ನಂಬಿಸಿದ್ದರು. ಈ ಹಿನ್ನೆಲೆಯಲ್ಲಿ 2025ರ ಮಾರ್ಚ್ 23ರಂದು ಪ್ರಾರಂಭದಲ್ಲಿ 50,000ರೂ. ಹೂಡಿಕೆ ಮಾಡಿದ ಗಣೇಶ್, ಬಳಿಕ ಆರೋಪಿಗಳ ಸಲಹೆ ಮೇರೆಗೆ 3 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಇದೀಗ ಅತ್ತ ಲಾಭವೂ ದೊರೆಯದೆ ಇತ್ತ ಹೂಡಿಕೆ ಮಾಡಿದ ಹಣವೂ ವಾಪಾಸ್ ನೀಡದೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಾಗ ಗಣೇಶ್ ಅವರಿಗೆ ತಾನು ಮೋಸ ಹೋಗಿರುವುದಾಗಿ ತಿಳಿಯಿತು.ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
