ಉಡುಪಿ ಜಿಲ್ಲೆಯಲ್ಲಿ ನಿವೇಶನ ರಹಿತ ಬಡವರು ನೂರಾರು ವರ್ಷಗಳಿಂದ ನೋವಿನ ಬದುಕು ಸಾಗಿಸುತ್ತಿದ್ದರೂ ಅದರ ಬಗ್ಗೆ ಚಕಾರವೆತ್ತದ ಜನಪ್ರತಿನಿದಿಗಳು ಈಗ ಕಂಬಳಕ್ಕಾಗಿ ಭೂಮಿಗೆ ಪೖಫೋಟಿ ನಡೆಸುತ್ತಿರುವುದು ನಾಚಿಕೆಗೇಡು ಹಾಗೂ ವಿಷಾದದ ವಿಚಾರ.
ಕಂಬಳ ಎನ್ನುವುದು ಕೆಲವೊಂದು ಕುಟುಂಬಗಳ ಸ್ವಂತ ಆಚರಣೆಯೇ ಹೊರತು ಅದು ಜಿಲ್ಲಾಡಳಿತದ ಅನಿವಾರ್ಯ ಕಾರ್ಯಕ್ರಮವಲ್ಲ.
ತಮ್ಮ ಸ್ವಪ್ರತಿಷ್ಟೆಯ ಪ್ರದರ್ಶನದ ಪ್ರತೀಕವಾದ ಕಂಬಳಕ್ಕೆ ಈಗ ಜಿಲ್ಲಾಡಳಿತದ ಶಿರೋನಾಮೆ ಕೊಟ್ಟು ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ವ್ಯವಸ್ಥಿತ ಸಂಚು ಇದು. ಕಂಬಳಕ್ಕೆ ಜಾಗ ಕಾಯ್ದಿರಿಸಿ ಆಮೇಲೆ ರೆಸಾರ್ಟ್ ತೆರೆಯುವ ಹುನ್ನಾರವಾಗಿದೆ. ಕೋಣಗಳನ್ನು ಓಡಿಸಿ ಕಂಬಳ ನಡೆಸುವುದರಿಂದ ಕೋಣಗಳಿಗೆ ಆಗುವ ಪ್ರಯೋಜನವಾದರೂ ಏನು?
ಕಂಬಳಕ್ಕೆ 6-30 ಎಕರೆ ಭೂಮಿ ಕಾದಿರಿಸಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಬಬ್ಬುಸ್ವಾಮಿ ಧೖವಸ್ಥಾನಗಳಿಗೆ ಕೋಲ , ನೇಮೋತ್ಸವ ನಡೆಸಲು ಒಂದೊಂದು ಎಕರೆ ಸರಕಾರಿ ಭೂಮಿಯನ್ನು ಮಂಜೂರು ಮಾಡಿಸಲು ಈಗ ಗುದ್ದಲಿ ಪೂಜೆ ನಡೆಸಿದ ಜನಪ್ರತಿನಿದಿನಗಳು ಹೋರಾಟ ನಡೆಸುತ್ತಾರೆಯೇ ? ಜಿಲ್ಲಾಡಳಿತ ಈ ಕರಾವಳಿಯ ಆರಾಧ್ಯ ಧೖವವಾದ ಬಬ್ಬುಸ್ವಾಮಿಯ ಎಲ್ಲಾ ಧೖವಸ್ಥಾನಗಳಿಗೆ ನೇಮೋತ್ಸವ ನಡೆಸಲು ಒಂದೊಂದು ಎಕರೆ ಭೂಮಿ ಕಾದಿರುಸುತ್ತದೆಯೇ ?
ಮುಂದೊಂದು ದಿನ ಜೂಜಾಟ ಆಡುವ ಕೋಳಿ ಅಂಕಕ್ಕೂ ನಿವೇಶನ ಕೊಡಬೇಕೆಂದು ಜನಪ್ರತಿನಿದಿನಗಳು ಬೇಡಿಕೆ ಇಟ್ಟು ಒತ್ತಾಯಿಸಿದರೆ ಅದಕ್ಕೂ ಜಿಲ್ಲಾಡಳಿತ ಮಣೆ ಹಾಕುತ್ತದೆಯೇ?
80 ಬಡಗುಬೆಟ್ಟು ಗ್ರಾಮದ ಸರ್ವೆ ನಂಬರ್ 11/1 ರಲ್ಲಿ 6-30 ಎಕರೆ ಭೂಮಿಯನ್ನು ಕಂಬಳಕ್ಕಾಗಿ ಕಾದಿರಿಸಿದ್ದು ಜನವಿರೋಧಿ ನೀತಿ. ಲಕ್ಷಾಂತರ ಬಡವರು ಉಡುಪಿ ಜಿಲ್ಲೆಯಲ್ಲಿ ಸ್ವಂತ ನಿವೇಶನವಿಲ್ಲದೇ ಕಣ್ಣೀರಿನ ಜೀವನ ನಡೆಸುತ್ತಿರುವಾಗ ಮೋಜು ಮಸ್ತಿಗಾಗಿ ಸರಕಾರಿ ಜಾಗವನ್ನು ಕಾದಿರಿಸಿರುವುದು ಅಕ್ಷಮ್ಯ . ಉಡುಪಿ ಕಂಬಳದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಾಮುಂದು ತಾಮುಂದು ಎಂದು ಗುದ್ದಲಿ ಪೂಜೆಗೆ ಮುಂದಾಗಿರುವುದು ಅತ್ಯಂತ ಹಾಸ್ಯಾಸ್ಪದ ಘಟನೆ. ಬಡವರು ಭೂಮಿಗಾಗಿ ಅರ್ಜಿ ಹಾಕಿದಾಗ ಸರಕಾರಿ ಭೂಮಿ ಲಭ್ಯವಿಲ್ಲಾ ಎಂದು ಹೇಳುವ ಜಿಲ್ಲಾಡಳಿತ ಈಗ ಯಾರನ್ನೋ ಸಂತೖಸಲು ಸರಕಾರಿ ಭೂಮಿ ಕಾದಿರಿಸಿರುವುದು ಬಡವರ ವಿರೋಧಿ ನಡೆಯಾಗಿದೆ.
ಜಿಲ್ಲಾಡಳಿತ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಬದಲು ಬಡರಿಗೆ ಬಧುಕಲು ನಿವೇಶನ ಮಂಜೂರು ಮಾಡಿ ಜನರ ಅಭಿವೃದ್ಧಿ ಕೆಲಸ ಮಾಡುವುದು ಅತ್ಯಂತ ಜರೂರಿನ ಆಧ್ಯತೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನ ಸಂಚಾಲಕ ಸುಂದರ ಮಾಸ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದೇ ರೀತಿ ಲಭ್ಯವಿರುವ ಭೂಮಿಯನ್ನು ಬಡವರಿಗೆ ಸ್ವಂತ ನಿವೇಶನ ಕೊಡದೇ ರಾಜಕಾರಣಿಗಳ ಅಣತಿಯಂತೆ ಅನಗತ್ಯ ಕೋಣಗಳ ಓಟಕ್ಕೆ ಮಂಜೂರು ಮಾಡಿದರೆ ದ. ಸಂ. ಸ.ತನ್ನ ಹೋರಾಟದ ದಾರಿಯನ್ನು ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಎಚ್ಚರಿಸಿದ್ದಾರೆ.
