ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿ ಕೋಶಾಧಿಕಾರಿ ಮಹಿಳಾ ಹೋರಾಟಗಾರ್ತಿ ಆಯಿಷಾ ಬೆಂಗಳೂರು ನಿಧನ

ಆಯಿಷಾ ಬೆಂಗಳೂರು

ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಕೋಶಾಧಿಕಾರಿಯಾಗಿಯೂ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ರಾಜ್ಯ ಸಮಿತಿ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದ ಆಯಿಷಾ ಬೆಂಗಳೂರು ಸೃಷ್ಟಿಕರ್ತನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿರುವುದು ನಮ್ಮೆಲ್ಲರ ಹೃದಯಗಳನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ. ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿಯು ಇವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಅವರು ಕೇವಲ ಒಂದು ಹುದ್ದೆಯನ್ನು ನಿರ್ವಹಿಸಿದವರಲ್ಲ ಬದಲಾಗಿ  ಚಳುವಳಿಯ ಸ್ಪಂದನವಾಗಿದ್ದರು.  ಅನ್ಯಾಯದ ವಿರುದ್ಧ ಹೋರಾಟವೇ ಜೀವನದ ಧ್ಯೇಯವೆಂದು ನಂಬಿದ ಅವರು, ಮಹಿಳೆಯರ ಹಕ್ಕುಗಳಿಗಾಗಿ, ಸಮಾಜದ ಅತೀ ದುರ್ಬಲ ವರ್ಗಗಳ ನ್ಯಾಯಕ್ಕಾಗಿ ಸದಾ ಸಜ್ಜರಾಗಿದ್ದರು.

ಹೋರಾಟದ ಮೈದಾನದಲ್ಲಿ ಅವರ ಹೆಜ್ಜೆಗಳು ಧೈರ್ಯದ ಗುರುತುಗಳನ್ನು ಮೂಡಿಸಿದೆ. ಅನ್ಯಾಯ, ಅಸಮಾನತೆ, ಹಿಂಸಾಚಾರಗಳ ವಿರುದ್ಧ ಅವರ ಧ್ವನಿ ಎಂದಿಗೂ ನಿಶ್ಶಬ್ದವಾಗಿರಲಿಲ್ಲ. ಮಹಿಳಾಪರ ಚಳುವಳಿಗಳಲ್ಲಿ ಹಲವಾರು ಮಹಿಳೆಯರ ಆತ್ಮವಿಶ್ವಾಸಕ್ಕೆ ಆಧಾರವಾಗಿದ್ದರು. ಬಡವರ ಮನೆಬಾಗಿಲಲ್ಲಿ ಸಾಂತ್ವನದ ಮಾತಾಗಿಯೂ, ಪ್ರತಿಭಟನೆಗಳ ವೇದಿಕೆಯಲ್ಲಿ ಉರಿಯುವ ಘೋಷಣೆಯಾಗಿಯೂ ಅವರು ಕಾಣಿಸಿಕೊಂಡರು.

ಸಂಕಷ್ಟಗಳು ಎದುರಾದಾಗ ಹಿಂಜರಿಯದ ಮನೋಬಲ, ಟೀಕೆಗಳು ಬಂದಾಗ ಕುಗ್ಗದ ಆತ್ಮಸ್ಥೈರ್ಯ, ಹಾಗೂ ಪ್ರತಿಯೊಂದು ಕಾರ್ಯದಲ್ಲೂ ಶಿಸ್ತು ಮತ್ತು ಪ್ರಾಮಾಣಿಕತೆ  ಇವೆಲ್ಲವೂ ಅವರ ವ್ಯಕ್ತಿತ್ವದ ಅಳಿಯದ ಗುರುತುಗಳು. ಅವರ ಬದುಕು ಕೇವಲ ವೈಯಕ್ತಿಕ ಸಾಧನೆಯ ಕಥೆಯಲ್ಲ. ಅದು ಒಂದು ಚಳುವಳಿಯ ಇತಿಹಾಸದ ಭಾಗ.

ಇವರು ತಮ್ಮ ಪತಿ, ಎರಡು ಗಂಡು ಮಕ್ಕಳು ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.  ಈ ಕಠಿಣ ಸಂದರ್ಭದಲ್ಲಿ ಸೃಷ್ಟಿಕರ್ತನು ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ಹಾಗೂ ಸಹನೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಅವರ ಪರಲೋಕ ಜೀವನವು ಸುಖದಾಯಕವಾಗಿರಲಿ.ಆಯಿಷಾ ಅವರ ಹೋರಾಟದ  ಬೆಳಕು ಆರಲಿಲ್ಲ ಬದಲಾಗಿ ಅದು ಅನೇಕ ಹೃದಯಗಳಲ್ಲಿ ಬೆಳಗುತ್ತಲೇ ಇರುತ್ತದೆ.