![]() |
| ಸಾಂದರ್ಭಿಕ ಚಿತ್ರ |
ಶಿರ್ವ: ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿತನಾದ ವಿದೇಶದ ವ್ಯಕ್ತಿ ಕೋರಿಯರ್ ಕಳುಹಿಸಿರುವುದಾಗಿ ನಂಬಿಸಿ ಶಿರ್ವದ ಮಹಿಳೆಗೆ ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾ ಎಂಬವರಿಗೆ ಒಂದು ತಿಂಗಳ ಹಿಂದೆ ಮೊಬೈಲ್ ಮೂಲಕ ಪರಿಚಯ ಆಗಿದ್ದು ಆತನು ತಾನು ವಿದೇಶದಲಿದ್ದು, ಅಲ್ಲಿಂದ ಗಿಫ್ಟ್ ಕೋರಿಯರ್ ಮಾಡಿರುವುದಾಗಿ ಫೆ.22ರಂದು ತಿಳಿಸಿದ್ದನು. ಫೆ.23ರಂದು ವಿದ್ಯಾ ಅವರಿಗೆ ಮಹಿಳೆಯೊಬ್ಬರು ಕರೆ ಮಾಡಿ ನಿಮಗೆ ವಿದೇಶದಿಂದ ಕೋರಿಯರ್ ಬಂದಿದ್ದು, ಅದು ವಿಮಾನ ನಿಲ್ದಾಣದಿಂದ ಹೊರಗಡೆ ಬರಬೇಕಾದರೆ 49,700ರೂ. ಹಣವನ್ನು ಪಾವತಿಸುವಂತೆ ತಿಳಿಸಿದ್ದಳು. ಅದರಂತೆ ವಿದ್ಯಾ ಹಣ ಪಾವತಿಸಿದ್ದರು.ಬಳಿಕ ಸ್ವಲ್ಪ ಸಮಯದ ಬಳಿಕ ಮತ್ತೆ ಕರೆ ಮಾಡಿ, ಕೋರಿಯರ್‌ನಲ್ಲಿ 30,000 ವಿದೇಶದ ಪೌಂಡ್ ಇದ್ದು ಇದಕ್ಕೆ ಕೂಡಲೇ 1,89,000ರೂ. ಹಣವನ್ನು ಹಾಕುವಂತೆ ತಿಳಿಸಿದ್ದಳು. ಹಾಗೇ ವಿದ್ಯಾ ಮತ್ತೆ ಹಣ ಪಾವತಿಸಿ ದರು. ಅದೇ ದಿನ ಸಂಜೆ ಕರೆ ಮಾಡಿ ಮನಿ ಎಕ್ಸ್ ಚೇಂಜ್ ಮಾಡಲು ಹೆಚ್ಚುವರಿ ಹಣ ಕಳುಹಿಸುವಂತೆ ತಿಳಿಸಿದಳು. ಅದರಂತೆ ಒಟ್ಟು 2,50,000ರೂ. ಹಣವನ್ನು ಪಾವತಿಸಿದ್ದರು.
ಹೀಗೆ ಹಲವು ಬಾರಿ ಫೆ.23ರಿಂದ ಫೆ.27ರವರೆಗೆ ಒಟ್ಟು 13,99,700ರೂ. ಹಣವನ್ನು ಬೇರೆ ಬೇರೆ ಖಾತೆಗೆ ಹಾಕಿದ್ದರು. ಆದರೆ ಕೋರಿಯರ್ ಮಾತ್ರ ಬಂದಿರುವುದಿಲ್ಲ. ಸ್ನೇಹಿತನ ಹೆಸರಿನಲ್ಲಿ ವಿದೇಶದ ವ್ಯಕ್ತಿ ವಿದ್ಯಾ ಅವರಿಗೆ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
