ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕೆರೆಯೊಂದರಲ್ಲಿ ಬಟ್ಟೆ ಒಗೆಯಲು ತೆರಳಿ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟವರು ಮಲ್ಲಿಕಟ್ಟೆ ಹೆದ್ದಾರಿ ಪಕ್ಕದ ಜೋಪಡಿ ನಿವಾಸಿಗಳೆಂದು ತಿಳಿದುಬಂದಿದ್ದು, ಮೂಲತಃ ಹಾವೇರಿ ಜಿಲ್ಲೆಯವರಾಗಿದ್ದಾರೆ. ಮೃತಪಟ್ಟವರನ್ನು ಸಮೀಪದ ಸರಕಾರಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳಾದ ವೈಶಾಲಿ ಹಾಗೂ ಸುನಿತಾ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ತಲುಪಲು ಆಂಬುಲೆನ್ಸ್ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞ ತಂಡಗಳಿಗೆ ಹರಸಹಾಸ ಪಡಬೇಕಾಯಿತು. ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ ಕುಂದಾಪುರ ಅಗ್ನಿಶಾಮಕ ದಳ, ಗಂಗೊಳ್ಳಿ ದಿನೇಶ್ ಕಾರ್ವಿ ತಂಡ ಹಾಗೂ ಟೀಮ್ ಹೆಚ್ ಐ ತುರ್ತುಸ್ಬಂದನ ತಂಡ, ಸ್ಥಳೀಯರು ಕಾರ್ಯಾಚರಣೆಗೆ ಸಾಥ್ ನೀಡಿದರು. ದಿನೇಶ್ ಖಾರ್ವಿ ಬಾಲಕಿಯರಿಬ್ಬರ ಮೃತದೇಹವನ್ನು ಹೊರ ತೆಗೆದರು. ಸದ್ಯ ಮೃತದೇಹಗಳನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಗಾರದ ಶೀತಲೀಕರಣ ಘಟಕಕ್ಕೆ ರವಾನಿಸಲಾಗಿದ್ದು ಸ್ಥಳದಲ್ಲಿ ಊರವರ ಹಾಗೂ ಹೆತ್ತವರ, ಕುಟುಂಬಸ್ಥರ ರೋಧನೆ ಮುಗಿಲುಮುಟ್ಟಿದೆ.
