ಉಡುಪಿ: ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತರಿಗೆ ಬೆದರಿಕೆ ಕರೆ
ಉಡುಪಿ: ಮುದರಂಗಡಿಯಲ್ಲಿ ಉದ್ಯಮಿ ಡೇವಿಡ್ ಡಿಸೋಜಾ
ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದ್ದು, ಜಿಲ್ಲೆಯ ಮೂರು ಪೊಲೀಸ್ ಠಾಣೆಗಳಲ್ಲಿ ಹಾಗೂ ಮೂಲ್ಕಿ ಠಾಣೆಯಲ್ಲಿ ಒಂದು ದೂರು ದಾಖಲಾಗಿದೆ.
ಕೊಲೆಯಾದ ಡೇವಿಡ್ ಡಿಸೋಜಾ ಅವರ ಪುತ್ರನಿಗೆ 5 ಕೋ. ರೂ. ನೀಡುವಂತೆ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ವಾಟ್ಸಪ್ ಕರೆ ಬಂದಿದೆ ಎನ್ನಲಾಗಿದ್ದು, ನಿನ್ನ ತಂದೆಯಿಂದ ನನ್ನ ಸಹೋದರನಿಗೆ ಸಾಕಷ್ಟು ನಷ್ಟವಾದ ಹಿನ್ನೆಲೆ ನಾನೇ ಕೊಲೆ ಮಾಡಿಸಿದ್ದೆ. ನಮಗಾಗಿರುವ ನಷ್ಟ ತುಂಬಲು 5 ಕೋ. ರೂ. ನೀಡಬೇಕು ಎಂದು ಜೀವ ಬೆದರಿಕೆ ಹಾಕಿರುವ ಕರೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಓರ್ವ ಉದ್ಯಮಿ ಹಾಗೂ ಖಾಸಗಿ ಸಂಸ್ಥೆಯ ವ್ಯಕ್ತಿಗೂ ಹೇಮಂತ್ ಪೂಜಾರಿ ಹೆಸರಿನಲ್ಲಿ ವಾಟ್ಸಪ್ ಕರೆಗಳು ಬಂದಿದ್ದು, ಹಣದ ಬೇಡಿಕೆಯೊಂದಿಗೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಗೆ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಉದ್ಯಮಿ ಡೇವಿಡ್ ಡಿ'ಸೋಜಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಭೂಗತ ಪಾತಕಿ ಹೇಮಂತ್ ಪೂಜಾರಿ ಸಹಾಯದಿಂದಲೇ ಹೊರ ರಾಜ್ಯಗಳ ಶೂಟರ್ಗಳನ್ನು ಕರೆಯಿಸಿ ಆತನ ಸಹೋದರ ಪ್ರಮುಖ ಕಿಂಗ್ ಪಿನ್ ಗುತ್ತಿಗೆದಾರ ಕಿಶೋರ್ಪೂಜಾರಿ ಎಂಬಾತ ತನ್ನ ಇತರ ಸಹಚರರ ಜತೆ ಸೇರಿ ಕೊಲೆ ಮಾಡಿಸಿದ್ದ. ಈ ಪ್ರಕರಣದಲ್ಲಿ ಪೊಲೀಸರಿಗೆ ಕಳೆದ 25 ವರ್ಷಗಳಿಂದ ಬೇಕಾಗಿರುವ ಪಾತಕಿ ಹೇಮಂತ್ ಪೂಜಾರಿಯನ್ನು ಹೊರತುಪಡಿಸಿ ಉಳಿದೆಲ್ಲಾ ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.
ಆದರೆ, ಆರೋಪಿ ಹೇಮಂತ್ ಪೂಜಾರಿಯ ಅಸ್ತಿತ್ವವೇ ಪ್ರಶ್ನೆಯಾಗಿದ್ದರಿಂದ ಹಾಗೂ ಈತನ ಬಗ್ಗೆ ಯಾವುದೇ ಸುಳಿವಿಲ್ಲದ ಕಾರಣ ಪೊಲೀಸರು ಇನ್ನೂ ಹುಡುಕಾಟದಲ್ಲಿದ್ದಾರೆ.