ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ) ಯುವ ಘಟಕದ ನೇತೃತ್ವದಲ್ಲಿ ಅಕ್ಟೋಬರ್ 17 ಶನಿವಾರ ಸಾಯಂಕಾಲ 6 ಗಂಟೆಯಿಂದ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ 9ನೇ ವರ್ಷದ ಉಡುಪಿ ದಾಂಡಿಯಾ 2026
ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಜೋಡಿ ನೃತ್ಯ, ಅತ್ಯುತ್ತಮ ವೇಷಭೂಷಣ, ಅತ್ಯುತ್ತಮ ಸಮೂಹ ನೃತ್ಯ, ಮಕ್ಕಳ ಅತ್ಯುತ್ತಮ ವೇಷಭೂಷಣ ಸ್ಪರ್ಧೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಅತ್ಯುತ್ತಮ ನವವಿವಾಹಿತ ಜೋಡಿ ನೃತ್ಯಕ್ಕೆ ವಿಶೇಷ ಬಹುಮಾನವಿದೆ.17ಅಕ್ಟೋಬರ್ 2026 ವೇಳೆಗೆ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿದ ದಂಪತಿಗಳಿಗೆ ಮಾತ್ರ ಈ ವಿಭಾಗದಲ್ಲಿ ಅವಕಾಶ ಇದೆ ಎಂದು ಯವ ಘಟಕ ಅಧ್ಯಕ್ಷ ಪ್ರದೀಪ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ,ಈ ಕಾರ್ಯಕ್ರಮದಲ್ಲಿ ವಿಶ್ವ ಚಾಂಪಿಯನ್ ಭಾರತದ ಮಹಿಳಾ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದ ಧನಲಕ್ಷ್ಮೀ ಪೂಜಾರಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಾದ ರೂಪಶ್ರೀ ವರ್ಕಾಡಿ,ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಭರತನಾಟ್ಯದಲ್ಲಿ ವಿಶ್ವ ದಾಖಲೆ ಮಾಡಿದ್ದ ವಿದುಷಿ ದೀಕ್ಷಾ ಸಹಿತ ಹಲವಾರು ತುಳು ಚಲನಚಿತ್ರ ನಟರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮೈದಾನ ವಿಶಿಷ್ಟ ರೀತಿಯ ಅಲಂಕಾರಗೊಳ್ಳಲಿದ್ದು, ಆಹಾರ ಮಳಿಗೆ ಇರಲಿದೆ ಮತ್ತು ವಿಶೇಷ ಸುಡು ಮದ್ದು ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮಕ್ಕೆ ಮತ್ತು ನೃತ್ಯಕ್ಕೆ ಆಗಮಿಸುವ ಎಲ್ಲರಿಗೂ ಉಚಿತ ಪ್ರವೇಶವಿದೆ.
ಪತ್ರಿಕಾಗೋಷ್ಠಿಯಲ್ಲಿ ವಿಘ್ನೇಶ್ ಪ್ರಭು, ವಿವೇಕ್ ಕಾಮತ್ , ಅಶ್ವಥ್ ದೇವಾಡಿಗ , ಶ್ರೇಯಸ್ ದೇವಾಡಿಗ ಉಪಸ್ಥಿತರಿದ್ದರು.

