ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ

 


ಉಡುಪಿ: ಅಲೆವೂರು - ದೆಂದೂರು ಕಟ್ಟೆ ಬಳಿ ಪೆಟ್ರೋಲ್ ಪಂಪ್ ಸಮೀಪ ನಿಲ್ಲಿಸಿದ್ದ ಬಸ್‌ಗೆ ಶುಕ್ರವಾರ ಬೆಳಗಿನ ಜಾವ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಪೆಟ್ರೋಲ್ ಪಂಪ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್‌ನ ಸಮೀಪವೇ ಇನ್ನೆರಡು ಬಸ್‌ಗಳು ಹಾಗೂ ಟೆಂಪೋ ನಿಲ್ಲಿಸಲಾಗಿತ್ತು. ಅಲ್ಲದೆ, ಪಕ್ಕದಲ್ಲೇ ಪೆಟ್ರೋಲ್ ಪಂಪ್ ಇದ್ದ ಕಾರಣ ಬೆಂಕಿ ವ್ಯಾಪಿಸಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.




ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಿಂದ ಬಸ್‌ಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಪೆಟ್ರೋಲ್ ಪಂಪ್ ಮಾಲೀಕರು ಹಾಗೂ ಬಸ್ ಮಾಲೀಕರು ಒಬ್ಬರೇ ಎಂದು ತಿಳಿದುಬಂದಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ