ಮುದರಂಗಡಿ ಶೂಟೌಟ್ ಪ್ರಕರಣ: ಮೂವರು ಶಾರ್ಪ್‌ ಶೂಟರ್‌ಗಳ ಬಂಧನ




ಉಡುಪಿ: ಮುದರಂಗಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್‌ ಡಿಸೋಜ ಅವರ ಗುಂಡಿನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಭಾರತದ ಮೂವರು ಶಾರ್ಪ್‌ ಶೂಟರ್‌ಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.



ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಡೇವಿಡ್‌ ಡಿಸೋಜ ಅವರನ್ನು ಹತ್ಯೆ ಮಾಡಲು ಉತ್ತರ ಪ್ರದೇಶ, ಜಾರ್ಖಂಡ್‌ ಹಾಗೂ ಬಿಹಾರದ ಶಾರ್ಪ್‌ ಶೂಟರ್‌ಗಳಿಗೆ ಸುಪಾರಿ ನೀಡಲಾಗಿತ್ತು ಎಂದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ.

ಸುಪಾರಿ ಪಡೆದಿದ್ದ ಮೂವರು ಆರೋಪಿಗಳು ಮುದರಂಗಡಿಗೆ ಆಗಮಿಸಿ ಶುಕ್ರವಾರ ಹಾಡಹಗಲೇ ಡೇವಿಡ್‌ ಡಿಸೋಜ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಬಳಿಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರು ಎನ್ನಲಾಗಿದೆ.


ಪ್ರಕರಣದ ಬೆನ್ನಲ್ಲೇ ಕಾರ್ಯಾಚರಣೆಗಿಳಿದ ಉಡುಪಿ ಪೊಲೀಸರು, ಜಿಲ್ಲೆಯ ಗಡಿ ಪ್ರದೇಶವಾದ ಶಿರೂರು ಸಮೀಪ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಪೈಕಿ ಒಬ್ಬನನ್ನು ರಾಜು ಎಂದು ಗುರುತಿಸಲಾಗಿದ್ದು, ಉಳಿದ ಇಬ್ಬರ ಗುರುತು ಇನ್ನಷ್ಟೇ ಖಚಿತವಾಗಬೇಕಿದೆ. ಆರೋಪಿಗಳು ವಿವಿಧ ಹೆಸರುಗಳಲ್ಲಿನ ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಸುಪಾರಿ ನೀಡಿದ ಪ್ರಮುಖ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಶಸ್ತ್ರಾಸ್ತ್ರ ಹಾಗೂ ಇತರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.