ಪ್ರಿಯಾಂಕ್ ಖರ್ಗೆ ಹೋಮ್ ಮಿನಿಸ್ಟರ್ , ಖಾದರ್ ಗೆ ಆರೋಗ್ಯ ,ರಾಮಲಿಂಗಾ ರೆಡ್ಡಿ ಬೆಂಗಳೂರು ಅಭಿವೃದ್ಧಿಗೆ ಪಟ್ಟು....



ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಅಂತಿಮವಾಗಿದ್ದು, ಉಪಮುಖ್ಯಮಂತ್ರಿ ಪರಮೇಶ್ವರ ಅವರಿಗೆ ಕಂದಾಯ, ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆ, ಪ್ರಿಯಾಂಕ್‌ ಖರ್ಗೆಗೆ ಗೃಹ ಖಾತೆ ನೀಡಲಾಗಿದೆ.

ಸಚಿವರಿಗೆ ಖಾತೆ ಹಂಚಿಕೆ ಮಾಡಲಾದ ಪಟ್ಟಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಅಂಕಿತ ಹಾಕಿದ್ದು, ರಾಜ್ಯಪತ್ರದಲ್ಲಿ ಅಧಿಕೃತವಾಗಿ ಗುರುವಾರ ಪ್ರಕಟಿಸಲಾಗಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿದ್ದ ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ, ಕೆ.ಎಚ್. ಮುನಿಯಪ್ಪ ಅವರಿಗೆ ಹಿಂದೆ ನಿರ್ವಹಿಸಿದ್ದ ಖಾತೆಯನ್ನೇ ನೀಡಲಾಗಿದೆ. ಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್‌ಗೆ, ಅವರು ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯಲ್ಲಿ(2013–18) ನಿಭಾಯಿಸಿದ್ದ ಆರೋಗ್ಯ ಖಾತೆಯನ್ನೇ ವಹಿಸಲಾಗಿದೆ. 

‘ನಿರ್ದಿಷ್ಟ ಖಾತೆಯೇ ಬೇಕು’ ಎಂದು ಕೆಲವರು ಪಟ್ಟು ಹಿಡಿದಿದ್ದರಿಂದ, ಖಾತೆ ಹಂಚಿಕೆ ಶಿವಕುಮಾರ್ ಅವರಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿಯಾದ ಶಿವಕುಮಾರ್, ಈ ವಿಷಯದಲ್ಲಿ ನೆರವು ನೀಡುವಂತೆ ಕೋರಿದರು. ಸಚಿವರ ಪಟ್ಟು ಕುರಿತು ಕಾಂಗ್ರೆಸ್‌ ವರಿಷ್ಠರಿಗೂ ಶಿವಕುಮಾರ್ ಅವರು ಮಾಹಿತಿ ನೀಡಿದರು ಎಂದು ಗೊತ್ತಾಗಿದೆ.

ಹಿರಿಯರಾದ ಸಚಿವರಾದ ರಾಮಲಿಂಗಾ ರೆಡ್ಡಿಯವರು ಜಲ ಸಂಪನ್ಮೂಲ ಬದಲು, ಬೆಂಗಳೂರು ಅಭಿವೃದ್ಧಿ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿದ್ದರು. ಹಿಂದಿನ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಅದೇ ಖಾತೆಗೆ ಒಲವು ತೋರಿದ್ದರು. ಶಿವಕುಮಾರ್‌ ನೇತೃತ್ವದ ಸರ್ಕಾರದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿದ್ದು, ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಹೊಣೆ ಹೊರಿಸಲಾಗಿದೆ.

ಹಿಂದಿನ ಸರ್ಕಾರದಲ್ಲಿ ರಾಮಲಿಂಗಾ ರೆಡ್ಡಿ ನಿರ್ವಹಿಸಿದ್ದ ಖಾತೆಯನ್ನು ಬೈರತಿ ಸುರೇಶ್‌ ಅವರಿಗೆ ನೀಡಲಾಗಿದೆ. 

‘ರಾಮಲಿಂಗಾ ರೆಡ್ಡಿ ಅವರು 2023ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ನೀಡಿದ್ದ ವಾಗ್ದಾನದಂತೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡದಿದ್ದರೆ ನಾನು ಶಾಸಕನಾಗಿ ಮುಂದುವರಿಯುತ್ತೇನೆಯೇ ವಿನಃ ಸಚಿವನಾಗಿ ಇರುವುದಿಲ್ಲ ಎಂದು ಶಿವಕುಮಾರ್‌ ಅವರಿಗೆ ಹೇಳಿದ್ದರು’ ಎಂಬುದಾಗಿ ರಾಮಲಿಂಗಾ ರೆಡ್ಡಿ ಅವರ ಆಪ್ತಮೂಲಗಳು ಹೇಳಿವೆ.

ಅವರ ಮುಂದಿನ ನಿರ್ಣಯ ಏನು ಎಂಬುದು ಸದ್ಯಕ್ಕೆ ನಿಗೂಢವಾಗಿಯೇ ಉಳಿದಿದೆ.

ರಾಮಲಿಂಗಾರೆಡ್ಡಿ ಅತೃಪ್ತಿ?: ಸಚಿವ ಸಂಪುಟದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಈ ಹಿಂದೆ ಶಿವಕುಮಾರ್ ನೀಡಿದ್ದರು ಎನ್ನಲಾದ ವಾಗ್ದಾನ ವಿಚಾರ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

2023ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲು ನಿರ್ಧರಿಸಿದ್ದರು.

ಆದರೆ, ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಪಟ್ಟು ಹಿಡಿದಿದ್ದ ಶಿವಕುಮಾರ್, ತಮ್ಮ ಸಹೋದರ ಡಿ.ಕೆ. ಸುರೇಶ್ ಜೊತೆ ರಾಮಲಿಂಗಾರೆಡ್ಡಿ ನಿವಾಸಕ್ಕೆ ತೆರಳಿ ಮನವೊಲಿಸಿದ್ದರು.

‘ಸದ್ಯಕ್ಕೆ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನನಗೆ ಬಿಟ್ಟುಕೊಡಿ. ಮುಂದೆ ನಾನು ಮುಖ್ಯಮಂತ್ರಿಯಾದ ಬಳಿಕ ಈ ಖಾತೆಯನ್ನು ನಿಮಗೇ ವಹಿಸುತ್ತೇನೆ’ ಎಂದು ರಾಮಲಿಂಗಾರೆಡ್ಡಿಗೆ ವಚನ ನೀಡಿದ್ದರು ಎನ್ನಲಾಗಿದೆ. ಈ ನಂಬಿಕೆಯ ಮೇಲೆಯೇ ಅಂದು ರಾಮಲಿಂಗಾರೆಡ್ಡಿ ಹಿಂದೆ ಸರಿದಿದ್ದರು ಎನ್ನಲಾಗಿದೆ.

ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಹಳೇ ವಾಗ್ದಾನ ನೆನಪಿಸಿದ್ದರು ಎನ್ನಲಾಗಿದೆ. ಆ ಸಂದರ್ಭದಲ್ಲೂ ಶಿವಕುಮಾರ್, ‘ಖಂಡಿತವಾಗಿಯೂ ನಿಮಗೇ ಬೆಂಗಳೂರು ಉಸ್ತುವಾರಿ ನೀಡುತ್ತೇವೆ, ಆತಂಕ ಬೇಡ’ ಎಂದು ಮತ್ತೊಮ್ಮೆ ಭರವಸೆ ನೀಡಿದ್ದರು ಎಂದು ಗೊತ್ತಾಗಿದೆ.

ಆದರೆ, ರಾಮಲಿಂಗಾರೆಡ್ಡಿ ಬದಲು, ಮುಂಬರುವ ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿತ್ತು ಎನ್ನಲಾಗಿದೆ. 

‘ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಕ್ಕಂತೆ ನಡೆಯಬೇಕು ಎಂದು ಶಿವಕುಮಾರ್ ಮತ್ತು ಅವರ ಆಪ್ತರು ಪ್ರತಿಪಾದಿಸುತ್ತಿದ್ದರು. ಈಗ ನನಗೆ ಕೊಟ್ಟ ಮಾತಿಗೆ ಶಿವಕುಮಾರ್ ಬದ್ಧರಾಗಬೇಕು’ ಎಂದು ರಾಮಲಿಂಗಾರೆಡ್ಡಿ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. 

ಕಂದಾಯಕ್ಕೆ ಮನವಿ: ‘ಈ ಹಿಂದೆ ನೀಡಿದ್ದ ಕಂದಾಯ ಇಲಾಖೆಯನ್ನೇ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ’ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.