ಟ್ರಂಪ್ ಮೇಲೆ ಶಾರ್ಪ್ ಶೂಟರ್ ದಾಳಿ ಯತ್ನ: ಅಮೆರಿಕ ಅಧ್ಯಕ್ಷ ಪಾರು



ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಮತ್ತೊಮ್ಮೆ ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ನಡೆದಿದೆ. ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದ ವೇಳೆ ನಡೆದ ಈ ಆತಂಕಕಾರಿ ಘಟನೆಯಿಂದ ಟ್ರಂಪ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

​ಬಂಧಿತ ಶಂಕಿತ ಶೂಟರ್‌ನನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್ ನಿವಾಸಿ ಕೋಲ್ ಟಾಮಸ್ ಅಲೆನ್ (31) ಎಂದು ಗುರುತಿಸಲಾಗಿದೆ. ದಾಳಿಯ ಬೆನ್ನಲ್ಲೇ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಆತನನ್ನು ಹಿಡಿದು ನೆಲಕ್ಕೆ ಕೆಡವಿ ಬಂಧಿಸಿದ್ದಾರೆ. ದಾಳಿಕೋರನು ಅರೆಬೆತ್ತಲೆ ಸ್ಥಿತಿಯಲ್ಲಿ, ಕೈಕಾಲುಗಳನ್ನು ಕಟ್ಟಲ್ಪಟ್ಟಿರುವ ಫೋಟೋ ಹಾಗೂ ವಿಡಿಯೋಗಳನ್ನು ಸ್ವತಃ ಟ್ರಂಪ್ ಅವರು ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

​ಹೋಟೆಲ್‌ನಲ್ಲಿ ಭೀತಿಯ ವಾತಾವರಣ

​ಹಿಲ್ಟನ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಭೋಜನಕೂಟದಲ್ಲಿ ಮೆಲಾನಿಯಾ ಟ್ರಂಪ್, ಜೆಡಿ ವ್ಯಾನ್ಸ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಶೂಟರ್ ಭದ್ರತಾ ಸಿಬ್ಬಂದಿಯನ್ನು ಭೇದಿಸಿ ಒಳನುಗ್ಗಲು ಯತ್ನಿಸಿ ಗುಂಡು ಹಾರಿಸಿದಾಗ ಗೊಂದಲದ ವಾತಾವರಣ ನಿರ್ಮಾಣವಾಯಿತು.

​ಗುಂಡಿನ ಸದ್ದು ಕೇಳುತ್ತಿದ್ದಂತೆ ಟ್ರಂಪ್ ಹಾಗೂ ಇತರ ಅಧಿಕಾರಿಗಳು ಟೇಬಲ್ ಕೆಳಗೆ ಅವಿತುಕೊಂಡರು.

​ತಕ್ಷಣವೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಟ್ರಂಪ್ ಮತ್ತು ಮೆಲಾನಿಯಾ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

​ದಾಳಿಯ ವೇಳೆ ಒಬ್ಬ ಅಧಿಕಾರಿ ಗಾಯಗೊಂಡಿದ್ದರೂ, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​"ಆತ ಒಬ್ಬ ಮಾನಸಿಕ ಅಸ್ವಸ್ಥ. ಇದೊಂದು 'ಒಂಟಿ ತೋಳದ ದಾಳಿ' (Lone Wolf Attack). ನಮ್ಮ ಭದ್ರತಾ ಪಡೆಗಳು ಅದ್ಭುತವಾಗಿ ಕೆಲಸ ಮಾಡಿವೆ. ಈ ಕಾರ್ಯಕ್ರಮವನ್ನು ಮುಂದಿನ 30 ದಿನಗಳಲ್ಲಿ ಇನ್ನೂ ಅದ್ಧೂರಿಯಾಗಿ ನಡೆಸುತ್ತೇವೆ."

— ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ