![]() |
| ನರೇಂದ್ರ ಮೋದಿ |
ಉಡುಪಿ: ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನ. 28ರಂದು ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವುದು ಖಚಿತಗೊಂಡಿದೆ.ಈ ಹಿನ್ನೆಲೆಯಲ್ಲಿ ಭದ್ರತೆ ಪರಿಶೀಲನೆಗೆ ಸೋಮವಾರ ವಿಶೇಷ ಭದ್ರತ ಪಡೆ (ಎಸ್ ಪಿಜಿ) ತಂಡ ಉಡುಪಿಗೆ ಭೇಟಿ ನೀಡಲಿದೆ.
ಪ್ರಸ್ತುತ ಇರುವ ವೇಳಾಪಟ್ಟಿಗೆ ಅನುಗುಣವಾಗಿ ಆದಿಉಡುಪಿ ಹೆಲಿಪ್ಯಾಡ್ ನಿಂದ ಶ್ರೀ ಕೃಷ್ಣ ಮಠ ಪರಿಸರ, ಪಾರ್ಕಿಂಗ್ ಪ್ರದೇಶದ ಸಮೀಪದಲ್ಲಿ ನಡೆಯಲಿರುವ ಲಕ್ಷಕಂಠ ಪಾರಾಯಣ ಕಾರ್ಯಕ್ರಮದ ಸ್ಥಳ ವೀಕ್ಷಣೆ ನಡೆಸಲಿದ್ದಾರೆ.ಸ್ಥಳ ವೀಕ್ಷಣೆ ಬಳಿಕ ತಂಡವು ಸುರಕ್ಷತಾ ದೃಷ್ಟಿಯಿಂದ ತುಸು ಮಾರ್ಪಾಡು ಮಾಡುವ ಸಾಧ್ಯತೆಗಳೂ ಇವೆ. ಅಲ್ಲದೆ ಕಾರ್ಯಕ್ರಮಕ್ಕೆ ಬಳಕೆ ಮಾಡುವ ಪರಿಕರ , ಪೆಂಡಾಲ್ ಬಗ್ಗೆಯೂ ಸಂಘಟಕರಿಂದ ಮಾಹಿತಿ ಪಡೆಯಲಿದೆ.ಮೋದಿ ಆಗಮನ ಹಿನ್ನೆಲೆಯಲ್ಲಿ ಉಡುಪಿ ನಗರದ ಬಹುತೇಕ ಕಡೆಗಳಲ್ಲಿ ರಸ್ತೆ ರಿಪೇರಿ ಸಹಿತ ಮೂಲಭೂತ ಸೌಕರ್ಯಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ.ಜೊತೆಗೆ ಮೆಸ್ಕಾಂ ತಂಡವು ಮೋದಿ ಬರುವ ದಾರಿಯುದ್ದಕ್ಕೂ ವಿದ್ಯುತ್ ಕಂಬ ಮತ್ತು ಟ್ರಾನ್ಸ್ ಫಾರ್ಮರ್ ಗಳನ್ನು ಸುಸ್ಥಿತಿಯಲ್ಲಿಡುವ ಕಾರ್ಯವನ್ನೂ ನಡೆಸುತ್ತಿದೆ.
