ಬೈಂದೂರು: 65 ನೇ ದಿನದತ್ತ ರೈತರ ಧರಣಿ- ಸ್ಥಳಕ್ಕೆ ಇಂದು ಸಂಸದ ಬಿ.ವೈ ರಾಘವೇಂದ್ರ ಭೇಟಿ

ರೈತರಿಗೆ ಬಿ.ವೈ ರಾಘವೇಂದ್ರ ಬೆಂಬಲ


ಬೈಂದೂರು: ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಲು 64 ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಇಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಭಿವೃದ್ದಿಯ ದೃಷ್ಟಿಯಿಂದ ಬೈಂದೂರು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಬೇಕಾಗಿದೆ. ಆದರೆ ಗ್ರಾಮೀಣ ಭಾಗಗಳ ಸೇರ್ಪಡೆಯಿಂದಾಗಿ ಹತ್ತಾರು ಕಿ.ಮೀ ದೂರದ ಹಳ್ಳಿ ಭಾಗದ ಜನರಿಗೆ ಸಮಸ್ಯೆಯಾಗಿದೆ. ಈಗಾಗಲೇ ಬೈಂದೂರು ರೈತರ ನಿಯೋಗ ಬೇಟಿ ಮಾಡಿದ ಸಂದರ್ಭ ವಿವಿಧ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಪಕ್ಷಾತೀತವಾದ ಹೋರಾಟಕ್ಕೆ ಎಲ್ಲಾ ನಾಯಕರ ಬೆಂಬಲವಿದ್ದು ಸಂಬಂಧಪಟ್ಟ ಇಲಾಖೆ ಜೊತೆ ಚರ್ಚಿಸಿ ರೈತರ ಪರವಾಗಿ ನಿಲ್ಲುವುದಾಗಿ ತಿಳಿಸಿದರು. ಮುಂದಿನ ಬೆಳಗಾವಿ ಅಧಿವೇಶನದ ವೇಳೆ ಸರಕಾರದ ಗಮನಕ್ಕೆ ತರುವ ಭರವಸೆ ನೀಡಿದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ರೈತರ ಬೇಡಿಕೆ ನ್ಯಾಯಯುತವಾಗಿದೆ. ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದ್ದು ಪ್ರಾಮಾಣಿಕವಾಗಿ ರೈತರ ಜೊತೆ ಬೆಂಬಲ ನೀಡುವುದಾಗಿ ತಿಳಿಸಿದರು.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ರೈತ ಮುಖಂಡ ವೀರಭದ್ರ ಗಾಣಿಗ , ವಿವಿಧ ಮುಖಂಡರು ಹಾಗೂ ರೈತರು ಹಾಜರಿದ್ದರು.