ಉಡುಪಿ: ಜವಾಬ್ದಾರಿಯುತವಾಗಿ ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

ಕೆಡಿಪಿ ಸಭೆ


ಉಡುಪಿ: ಸರ್ಕಾರದ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಬೇಕೆಂದರೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಆಗಷ್ಟೇ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. 

ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವರು, ಅಧಿಕಾರಿಗಳು ಬದ್ಧತೆಯಿಂದ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಿದರು.



ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ತಯಾರಿ ಮಾಡಲಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ 8000 ಕೋಟಿ ರೂಪಾಯಿ ಅನುದಾನವನ್ನು ನೀಡುತ್ತಿದೆ‌. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದರು. 

ವಾರಾಹಿ ನೀರಾವರಿ ಯೋಜನೆಗೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಈವರೆಗೂ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಿರುವುದಿಲ್ಲ, ಈ ಕುರಿತು ಸರ್ಕಾರದಿಂದ ಹಣ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು. ಈ ಯೋಜನೆಯಲ್ಲಿ ಕೆಲವು ಜಮೀನುಗಳು ಡೀಮ್ಡ್ ಫಾರೆಸ್ಟ್ ಹಾಗೂ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅನುಮತಿ  ನೀಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು. 

ಜಿಲ್ಲೆಯಲ್ಲಿ ಸಾರ್ವಜನಿಕರು ವಾಸದ ಮನೆ ಅಥವಾ ಕಟ್ಟಡ ಕಟ್ಟಲು ಬೇಡಿಕೆ ಇರುವ ಕೆಂಪು ಕಲ್ಲು ಗಣಿಗಾರಿಕೆಗೆ ಪಟ್ಟಾ ಲ್ಯಾಂಡ್ ನಲ್ಲಿ 3A ನಲ್ಲಿ ಅನುಮತಿ ನೀಡಿದರೂ‌ ಸಹ ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಕ್ರಮ ವಹಿಸಬೇಕು ಎಂದ ಸಚಿವರು, ಇದಕ್ಕಾಗಿ  ಮೂರು ದಿನಗಳ ಗಡುವು ನೀಡಿದರು. 

ಶಾಸಕರಾದ ಸುನೀಲ್ ಕುಮಾರ್, ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ,‌ ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಮಂಜುನಾಥ್ ಭಂಡಾರಿ, ಡಾ.ಧನಂಜಯ್ ಸರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ‌ಟಿ.ಕೆ.ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.